ಉ.ಪ್ರದೇಶದಲ್ಲಿ ಹೊಸ ಮದರಸಾಗಳಿಗೆ ಸರ್ಕಾರದ ಅನುದಾನವಿಲ್ಲ!

UP

ಲಕ್ನೋ : ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದ ಸಚಿವ ಸಂಪುಟ ಸಭೆಯೂ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಉತ್ತರಪ್ರದೇಶದಲ್ಲಿ(Uttarpradesh) ಇನ್ನು ಮುಂದೆ ನಿರ್ಮಾಣವಾಗುವ ಹೊಸ ಮದರಸಾಗಳಿಗೆ ಸರ್ಕಾರದ ಅನುದಾನವನ್ನು ನೀಡದಿರಲು ಯೋಗಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟ ತೀರ್ಮಾನಿಸಿದೆ.

ಈ ಸಂಬಂಧ ಆದೇಶವನ್ನು ಹೊರಡಿಸಲಾಗಿದೆ. ಇನ್ನು ಉತ್ತರಪ್ರದೇಶ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮಂಡಿಸಿದ್ದ ಈ ನಿರ್ಣಯವನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಕ್ಯಾಬಿನೆಟ್ ಸಮಿತಿ ಅಂಗೀಕರಿಸಿದೆ. ಈ ಮೂಲಕ ಉತ್ತರಪ್ರದೇಶದಲ್ಲಿ ಮದರಸಾಗಳಿಗೆ ಸರ್ಕಾರದ ಮೂಲಕ ನೀಡುವ ಎಲ್ಲ ರೀತಿಯ ಆರ್ಥಿಕ ನೆರವನ್ನು ನಿಲ್ಲಿಸಲಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸರ್ಕಾರದ ಎಲ್ಲ ಸಚಿವರು ಭಾಗವಹಿಸಿದ್ದರು. ಹೊಸ ಮದರಸಾಗಳಿಗೆ ಸರ್ಕಾರದ ಅನುದಾನ ನಿಲ್ಲಿಸುವ ನಿರ್ಣಯಕ್ಕೆ ಎಲ್ಲ ಸಚಿವರು ಸಹಮತ ವ್ಯಕ್ತಪಡಿಸಿದರು.

ಇನ್ನು ಈ ಹಿಂದೆ ಅಖಿಲೇಶ್ ಯಾದವ್(Akhilesh Yadav) ನೇತೃತ್ವದ ಸಮಾಜವಾದಿ ಪಕ್ಷವೂ ಮದರಸಾಗಳಿಗೆ ಸರ್ಕಾರದ ಅನುದಾನವನ್ನು ನೀಡಲು ಕಾನೂನನ್ನು ರಚಿಸಿತ್ತು. ಈ ಪ್ರಕಾರ ಉತ್ತರಪ್ರದೇಶದಲ್ಲಿ ನಿರ್ಮಾಣವಾಗುವ ಹೊಸ ಮದರಸಾಗಳಿಗೆ ಸರ್ಕಾರ ಅನುದಾನ ನೀಡಬೇಕಿತ್ತು. ಆದರೆ 2016ರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಈ ಕಾನೂನನ್ನು ರದ್ದುಗೊಳಿಸಿತ್ತು. ಇದರ ಮುಂದುವರೆದ ಭಾಗವಾಗಿ ಇದೀಗ ಹೊಸ ಮದರಸಾಗಳಿಗೆ ಸರ್ಕಾರದ ಅನುದಾನ ನೀಡದಿರಲು ನಿರ್ಧರಿಸಲಾಗಿದೆ.

ಇನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಇತ್ತೀಚೆಗೆ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣ ನೀಡುವ ಬಗ್ಗೆಯೂ ಚಿಂತನೆ ನಡೆಸಿದೆ. ಆಧುನಿಕ ಶಿಕ್ಷಣ ನೀಡುವ ಮದರಸಾಗಳಿಗೆ ಸರ್ಕಾರ ಪ್ರೋತ್ಸಾಹ ನೀಡುವ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ.

Exit mobile version