ದೇಶದಲ್ಲಿ ಷರಿಯಾ ಕಾನೂನು ಜಾರಿಗೊಳಿಸಲು ಕಾಂಗ್ರೆಸ್ ಬಯಸಿದೆ: ಕೈ ವಿರುದ್ದ ಯೋಗಿ ಆದಿತ್ಯನಾಥ್ ಟೀಕೆ

Lucknow (Uttar Pradesh): ದೇಶದಲ್ಲಿ ಷರಿಯಾ ಕಾನೂನು ಜಾರಿಗೊಳಿಸಲು ಕಾಂಗ್ರೆಸ್ ಬಯಸುತ್ತಿದ್ದು, ಇನ್ನೊಂದೆಡೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಅಲ್ಪಸಂಖ್ಯಾತರಿಗೆ ಹಂಚುವ ದುರುದ್ದೇಶ ಹೊಂದಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manamohan Singh) ಅವರು ದೇಶದ ಸಂಪನ್ಮೂಲಗಳಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎಂದು ಹೇಗೆ ಪ್ರತಿಪಾದಿಸಿದ್ದಾರೆ ಎಂಬುದನ್ನು ಮತದಾರರಿಗೆ ನೆನಪಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ನುಸುಳುಕೋರರಿಗೆ ಹಂಚಬಹುದು ಎಂದು ರಾಜಸ್ಥಾನದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ನಿಲುವನ್ನು ಪ್ರತಿಧ್ವನಿಸಿದರು.

ದೇಶದ ಸಂಪನ್ಮೂಲಗಳಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಪ್ರತಿಪಾದಿಸಿದ್ದರು. ಇದು ದಲಿತರು, ಹಿಂದುಳಿದ ವರ್ಗಗಳು, ಬಡವರು, ರೈತರು, ನಮ್ಮ ಹಿಂದೂ ತಾಯಂದಿರು, ಸಹೋದರಿಯರು ಮತ್ತು ಯುವಕರನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತದೆ? ಎಂದು ಆದಿತ್ಯನಾಥ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ (Congress) ಪ್ರಣಾಳಿಕೆಯನ್ನು ಗುರಿಯಾಗಿಸಿದ ಪ್ರಧಾನಿ ಮೋದಿಯಂತೆ, ಆದಿತ್ಯನಾಥ್ ಕೂಡ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ಮೈತ್ರಿ ಸದಸ್ಯರು ಮೋಸದ ಪ್ರಣಾಳಿಕೆಯನ್ನು ಮಂಡಿಸುವ ಮೂಲಕ ದೇಶಕ್ಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.

ಒಂದು ನಿರ್ದಿಷ್ಟ ಸಮುದಾಯಕ್ಕೆ ವೈಯಕ್ತಿಕ ಕಾನೂನುಗಳನ್ನು ತರುವ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಈ ಕ್ರಮದ ಮೂಲಕ, ಕಾಂಗ್ರೆಸ್ ಷರಿಯಾ ಕಾನೂನನ್ನು ಹೇರುವ ಗುರಿಯನ್ನು ಹೊಂದಿದೆ, ಭಾರತದಲ್ಲಿ ತಾಲಿಬಾನ್ ಶೈಲಿಯ ಆಡಳಿತವನ್ನು ತರಲು ಕಾಂಗ್ರೆಸ್ ಬಯಸುತ್ತದೆ. ಬಾಬಾ ಸಾಹೇಬ್ (Baba Saheb) ಅವರು ರಚಿಸಿದ ಸಂವಿಧಾನಕ್ಕೆ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ಮೈತ್ರಿ ಅಪಾಯವನ್ನುಂಟುಮಾಡುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ.

ಬಡತನವನ್ನು ನಿರ್ಮೂಲನೆ ಮಾಡುವ ಭರವಸೆ ನೀಡುವ ಮೂಲಕ, ರಹಸ್ಯವಾಗಿ ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಲು ಯೋಜಿಸುತ್ತಿದ್ದಾರೆ, ಜೊತೆಗೆ ನಿಮ್ಮ ಹೆಣ್ಣುಮಕ್ಕಳು ಮತ್ತು ತಾಯಂದಿರ ಆಭರಣಗಳನ್ನು ವಶಪಡಿಸಿಕೊಳ್ಳಲು ಯೋಜಿಸುತ್ತಿದ್ದಾರೆ ಎಂದು ಆರೋಪಿಸಿದರು.

Exit mobile version