‘ಕೈ’ ಬಿಟ್ಟ ಮತದಾರ, ಬಿಜೆಪಿಗೆ ‘ವರ’ವಾದ ಯೋಗಿ!

yogi


ಪಂಚರಾಜ್ಯಗಳ ಚುನಾವಣಾ ಮತಎಣಿಕೆ ಪ್ರಾರಂಭವಾಗಿದೆ. ಈಗಾಗಲೇ ಬಹುತೇಕ ಕಡೆ 5ನೇ ಸುತ್ತಿನ ಮತಎಣಿಕೆ ಪ್ರಾರಂಭವಾಗಿದ್ದು, ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಪಂಜಾಬನಲ್ಲಿ ಮತದಾರ ‘ಕೈ’ ಬಿಟ್ಟಿರುವ ಸೂಚನೆ ಸಿಗುತ್ತಿವೆ. ಇನ್ನು ಗೋವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇಲ್ಲಿಯೂ ಕೊನೆಯ ಕ್ಷಣದಲ್ಲಿ ಏನಾಗಲಿದೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ.

ಪಂಚರಾಜ್ಯಗಳ ಮತ ಎಣಿಕೆಯ ಆರಂಭಿಕ ಅಂಕಿಅಂಶಗಳನ್ನು ಗಮನಿಸಿದರೆ ಬಿಜೆಪಿ ಉತ್ತರಪ್ರದೇಶದಲ್ಲಿ ಅಧಿಕ್ಕಾರಕ್ಕೇರುವ ಸೂಚನೆಗಳಿವೆ. ಆದರೆ ಸ್ಪಷ್ಟ ಬಹುಮತ ಕಷ್ಟವಾಗಬಹುದು. ಅಖಿಲೇಶ್ ಯಾದವ ನೇತೃತ್ವದ ಸಮಾಜವಾದಿ ಪಕ್ಷ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಪೈಪೋಟಿ ನೀಡುತ್ತಿದೆ. ಯೋಗಿ ನೇತೃತ್ವದಲ್ಲಿ ಬಿಜೆಪಿ ಈ ಚುನಾವಣೆಯನ್ನು ಎದುರಿಸುತ್ತಿದ್ದು, ಯೋಗಿ ಆದಿತ್ಯನಾಥರ ವೈಯಕ್ತಿಕ ವರ್ಚಸ್ಸಿಗೆ ಈ ಚುನಾವಣೆ ಸವಾಲಾಗಲಿದೆ.

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸ್ಪಷ್ಟ ಬಹುಮತದೊಂದಿಗೆ ಗೆದ್ದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿ ಗದ್ದುಗೆ ಏರುವುದು ಸುಲಭವಾಗಲಿದೆ. ಅದೇ ರೀತಿ ಹಿಂದುತ್ವದ ಮುಖವಾಣಿಯಾಗಿರುವ ಯೋಗಿ ವರ್ಚಸ್ಸು ರಾಷ್ಟ್ರಮಟ್ಟದಲ್ಲಿಯೂ ವೃದ್ದಿಸಲಿದೆ. ಸ್ಪಷ್ಟ ಬಹುಮತ ದೊರೆಯದಿದ್ದರೆ ಬಿಎಸ್‍ಪಿ ಸೇರಿದಂತೆ ಕೆಲ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಅನಿವಾರ್ಯವಾಗಲಿದೆ. ಆಗ ಯೋಗಿ ವರ್ಚಸ್ಸು ಕುಗ್ಗಲಿದೆ.

ಇನ್ನು ಪಂಜಾಬ್‍ನಲ್ಲಿ ಎಎಪಿ ಅಧಿಕಾರಕ್ಕೇರುವ ಸ್ಪಷ್ಟ ಸೂಚನೆಗಳು ಸಿಗುತ್ತಿವೆ. ಭಗವಂತ್ ಮಾನ್ ನೇತೃತ್ವದಲ್ಲಿ ಎಎಪಿ ಪಂಜಾಬ್‍ನಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಪಂಜಾಬ್‍ನಲ್ಲಿ ಬಿಜೆಪಿ ಲೆಕ್ಕಕ್ಕಿಲ್ಲ. ಆದರೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ಪಕ್ಷದ ಒಳಜಗಳಗಳು, ಸಂಘಟನೆಯಲ್ಲಿ ಬಿರುಕು, ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಪಕ್ಷದ ವಿರುದ್ದ ಕೆಲಸ ಮಾಡಿದೆ. ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅಮೃತಸರ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಸೋಲುವ ಭೀತಿ ಆವರಿಸಿದೆ.


ಇನ್ನೊಂದೆಡೆ ಗೋವಾದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ಬಿಜೆಪಿ ಕೊನೆ ಕ್ಷಣದಲ್ಲಿ ಪಕ್ಷೇತರ ಮತ್ತು ಇತರ ಪ್ರಾದೇಶಿಕ ಪಕ್ಷಗಳ ನೆರವಿನಿಂದ ಅಧಿಕಾರಕ್ಕೇರಿದರೆ ಅಚ್ಚರಿ ಪಡೆಬೇಕಿಲ್ಲ. ಹೀಗಾಗಿ ಕಾಂಗ್ರೆಸ್ ಬಹುಮತ ದೊರೆತಲ್ಲಿ, ವಿಳಂಬ ಮಾಡದೇ ಸರ್ಕಾರ ರಚನೆಗೆ ಮುಂದಾಗಲು ಬೇಕಾದ ಸಿದ್ದತೆ ನಡೆಸಿದೆ.

ಇನ್ನು ಉತ್ತರಾಖಂಡ ಮತ್ತು ಮಣಿಪುರದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಬಿಜೆಪಿ ಈ ರಾಜ್ಯಗಳಲ್ಲಿ ಮತ್ತೇ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿದೆ. ಕಾಂಗ್ರೆಸ್ ನಿರೀಕ್ಷಿತ ಪೈಪೋಟಿ ನೀಡುತ್ತಿಲ್ಲ. ಈ ಎರಡು ರಾಜ್ಯಗಳಲ್ಲಿ ಈಗಾಗಲೇ ಬಿಜೆಪಿ ಅಧಿಕಾರದಲ್ಲಿದ್ದು, ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಒಟ್ಟಾರೆಯಾಗಿ ಪಂಚರಾಜ್ಯಗಳ ಆರಂಭಿಕ ಮತಎಣಿಕೆಯನ್ನು ಗಮನಿಸಿದರೆ, ಕಾಂಗ್ರೆಸ್ ನೇಪತ್ಯಕ್ಕೆ ಸರಿಯುತ್ತಿದೆ.

ಕಾಂಗ್ರೆಸ್ ಜಾಗದಲ್ಲಿ ಬಿಜೆಪಿಯನ್ನು ಎದುರಿಸಲು ಹೊಸ ಪ್ರಾದೇಶಿಕ ಶಕ್ತಿಗಳು ಉದಯಿಸುತ್ತಿವೆ. ಪಂಜಾಬ್‍ನಂತ ದೊಡ್ಡ ರಾಜ್ಯವನ್ನು ಕಾಂಗ್ರೆಸ್ ಕಳೆದುಕೊಂಡು, ಇದೀಗ ಎರಡು ಲೋಕಸಭಾ ಸ್ಥಾನಗಳಿರುವ ಸಣ್ಣ ರಾಜ್ಯ ಗೋವಾದಲ್ಲಿ ಅಧಿಕಾರ ಹಿಡಿಯಲು ಪರದಾಡುತ್ತಿದೆ.

Exit mobile version