ಬೆಂಗಳೂರು, ಜೂ. 30: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲಿ ಉಂಟಾಗಿದ್ದ ಕುತೂಹಲಕ್ಕೆ ತೆರೆಬಿದ್ದಿದ್ದು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷ ರಾಮಯ್ಯ ಮುಂದುವರಿಕೆಗೆ ಕೈ ಹೈಕಮಾಂಡ್ ಸೂಚಿಸಿದೆ.
ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿತ್ತು. ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಬಣಗಳ ನಡುವೆಯೂ ಸಾಕಷ್ಟು ಜಟಾಪಟಿಗೆ ಕಾರಣವಾಗಿತ್ತು. ಒಂದೆಡೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ನಲಪಾಡ್ ನೇಮಕ್ಕೆ ಭಾರೀ ಪ್ರಯತ್ನ ಸಹ ನಡೆದಿತ್ತು.
ಆದರೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರಕ್ಕೆ ಬಿಗ್ ಟ್ವಿಸ್ಟ್ ವೊಂದು ಸಿಕ್ಕಿದ್ದು, ಆ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಬಿದ್ದಿದೆ. ಇಂಡಿಯನ್ ಯೂತ್ ಕಾಂಗ್ರೆಸ್ ತನ್ನ ವೆಬ್ ಸೈಟ್ ನಲ್ಲಿ ರಕ್ಷಾ ರಾಮಯ್ಯ ಅವರ ಹೆಸರನ್ನು ಯುವ ಕಾಂಗ್ರೆಸ್ ಅಧ್ಯಕ್ಷವೆಂದು ಘೋಷಿಸಿದೆ. ಈ ಮೂಲಕ ಯುವ ಕಾಂಗ್ರೆಸ್ ಅಧ್ಯಕ್ಷಗಾದಿ ಆಕಾಂಕ್ಷಿಯಾಗಿದ್ದ ನಲಪಾಡ್ ಗೆ ಬಿಗ್ ಶಾಕ್ ನೀಡಿದೆ.
ರಕ್ಷ ರಾಮಯ್ಯ ಅವರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಉಳಿಯಲಿದ್ದಾರೆ. ಈ ಹುದ್ದೆ ಬಗ್ಗೆ ಬಹಳಷ್ಟು ಅನಧಿಕೃತ ಹಾಗೂ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಕೆಪಿವೈಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟತೆ ಬೇಕಾದರೆ ಯೂಥ್ ಕಾಂಗ್ರೆಸ್ ವೆಬ್ ಸೈಟ್ನಲ್ಲಿ ವೀಕ್ಷಿಸಬಹುದಾಗಿದೆ. ಈ ಜಾಲದಲ್ಲಿ ನೀಡಲಾಗಿರುವ ಮಾಹಿತಿಯನ್ನು ಎಐಸಿಸಿ, ಐವೈಸಿ ಅಧ್ಯಕ್ಷರೇ ಅನುಮೋದನೆ ನೀಡಿದ್ದಾರೆ” ಎಂದು ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಪ್ರಕಟಣೆ ಬಂದಿದೆ.