ಮಂಡ್ಯ, ಫೆ. 27: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಡ್ಯಾಂನ ನಿರ್ಬಂಧಿತ ಪ್ರದೇಶದಲ್ಲಿ ಪೊಲೀಸ್ ಜೀಪ್ ಚಲಾಯಿಸಿ ಯುವಕನೊಬ್ಬ ನಿಯಮ ಉಲ್ಲಂಘಿಸಿರುವ ಘಟನೆ ನಡೆದಿದೆ.
ಜೀಪ್ ನಿರ್ವಹಣೆ ಹೊತ್ತಿದ್ದ ಪೊಲೀಸ್ ಅಧಿಕಾರಿಯೇ ಯುವಕನ ಪಕ್ಕದಲ್ಲೇ ಕುಳಿತು ಸಾಥ್ ನೀಡಿದ್ದಾರೆ. ಆ ಯುವಕ ವಾಹನ ಚಲಾಯಿಸಿ, ಇಡೀ ವೃತ್ತಾಂತವನ್ನು ವಿಡಿಯೊ ಮಾಡಿಸಿಕೊಂಡಿದ್ದಾನೆ. ಡ್ರೈವರ್ ಸೀಟ್ ಪಕ್ಕ ಕುಳಿತ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಿಂದಲೇ ವಿಡಿಯೊ ಮಾಡಿಸಿದ್ದಾನೆ.
ಕೆಆರ್‌ಎಸ್ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಇದೆ. ಆದರೆ, ನಿರ್ಬಂಧವಿದ್ದರೂ ಭದ್ರತೆ ನೋಡಿಕೊಳ್ಳಬೇಕಿದ್ದ ಪೊಲೀಸರಿಂದಲೇ ನಿಯಮ ಉಲ್ಲಂಘನೆಯಾಗಿದೆ.
ಯುವಕ ಪೊಲೀಸ್ ಜೀಪ್ ಚಲಾಯಿಸುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡ್ಯಾಂ ಭದ್ರತೆ ನೋಡಿಕೊಳ್ಳಬೇಕಿದ್ದ ಅಧಿಕಾರಿಯಿಂದಲೇ ನಿಯಮ ಉಲ್ಲಂಘನೆ ಆಗಿದೆ. ನಿಯಮ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹಿಸಿದ್ದಾರೆ.