ಕೇರಳದಲ್ಲಿ ಝಿಕಾ ವೈರಸ್ ಪತ್ತೆ: ಮೊದಲ ಪ್ರಕರಣ

ತಿರುವನಂತಪುರ, ಜು. 09: ಕೊರೊನಾ ಜೊತೆಗೆ ಈಗ ಝಿಕಾ ವೈರಸ್‌ನ ಆತಂಕ ಶುರುವಾಗಿದೆ. ಕೇರಳದಲ್ಲಿ ಝಿಕಾ ವೈರಸ್‌ನ ಮೊದಲ ಪ್ರಕರಣ ಪತ್ತೆಯಾಗಿದ್ದು, 24 ವರ್ಷದ ಗರ್ಭಿಣಿಗೆ ಸೊಳ್ಳೆಯಿಂದ ಹರಡುವ ಈ ಕಾಯಿಲೆ ಇರುವುದು ದೃಢಪಟ್ಟಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗುರುವಾರ ತಿಳಿಸಿದ್ದಾರೆ.

ತಿರುವನಂತಪುರಂನಲ್ಲಿ ಇನ್ನೂ 13 ಶಂಕಿತ ಪ್ರಕರಣಗಳಿವೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ)ಯಿಂದ ದೃಢೀಕರಣಕ್ಕಾಗಿ ಸರ್ಕಾರವು ಕಾಯುತ್ತಿದೆ ಎಂದು ಸಚಿವರು ಪಿಟಿಐಗೆ ತಿಳಿಸಿದ್ದಾರೆ.

ಝಿಕಾ ಸೋಂಕಿತ ಮಹಿಳೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜುಲೈ 7 ರಂದು ಮಗುವಿಗೆ ಜನ್ಮ ನೀಡಿದ್ದಾರೆ. ಜ್ವರ, ತಲೆನೋವು ಮತ್ತು ದೇಹದ ಮೇಲೆ ಕೆಂಪು ಮಚ್ಚೆ ಮೂಡಿದ್ದರಿಂದ ಜೂನ್ 28 ರಂದು ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಯಲ್ಲಿ ನಡೆದ ಪರೀಕ್ಷೆಯಲ್ಲಿ ಆಕೆಗೆ ಝಿಕಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪ್ರಯೋಗಾಲಯ ಮಾದರಿಗಳನ್ನು ಪುಣೆಯ ಎನ್‌ಐವಿಗೆ ಕಳುಹಿಸಲಾಗಿದೆ.

ಝಿಕಾ ರೋಗಲಕ್ಷಣಗಳಾದ ಜ್ವರ, ಚರ್ಮದ ದದ್ದುಗಳು ಮತ್ತು ಕೀಲು ನೋವು ಡೆಂಗ್ಯೂ ರೋಗಲಕ್ಷಣಗಳನ್ನೇ ಹೋಲುತ್ತವೆ.

Exit mobile version