ಕಾನ್ಪುರದಲ್ಲಿ 89 ಮಂದಿಗೆ ಕಾಣಿಸಿಕೊಂಡ ಝೀಕಾ ವೈರಸ್‌

ಉತ್ತರ ಪ್ರದೇಶದ ಕಾನ್ಪುರದಲ್ಲಿ ಝೀಕಾ ವೈರಸ್ ಕಾಣಿಸಿಕೊಂಡಿದೆ. ಸೊಳ್ಳೆಯಿಂದ ಹರಡುವ ಈ ರೋಗವು ಈಗಾಗಲೇ 89 ಜನರಲ್ಲಿ ಪತ್ತೆಯಾಗಿದ್ದು, ಇವರಲ್ಲಿ 17 ಜನ ಮಕ್ಕಳು ಹಾಗೂ ಒಬ್ಬಾಕೆ ಗರ್ಭಿಣಿಯಾಗಿದ್ದಾರೆ. ವಿರಳಾತಿವಿರಳ ನರ ಸಂಬಂಧಿ ಕಾಯಿಲೆಗೂ ಕಾರಣವಾಗುವ ಈ ವೈರಸ್,80% ಜನರಲ್ಲಿ ಯಾವುದೇ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಉಳಿದವರಲ್ಲಿ ಸಾಮಾನ್ಯ ಜ್ವರ ಹಾಗೂ ಮೈ ಕೈ ನೋವಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 

ಅಕ್ಟೋಬರ್ 23ರಂದು ಕಾನ್ಪುರದಲ್ಲಿ ಮೊದಲನೇ ಝೀಕಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಕಳೆದ ವಾರದಿಂದ ಈ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಆತಂಕದ ಸಂಗತಿ ಏನೆಂದರೆ, ಕಾನ್ಪುರದಿಂದ 90 ಕಿ.ಮೀ. ದೂರ ಇರುವಂತಹ ಕನೌಜ್ ಎಂಬಲ್ಲಿಯೂ ಝೀಕಾ ವೈರಸ್ ಪತ್ತೆಯಾಗಿದ್ದು, ಇದು ಮತ್ತಷ್ಟು ಪ್ರದೇಶಗಳಿಗೆ ಹರಡಿರಬಹುದಾದ ಸಂದೇಹವನ್ನು ಸೃಷ್ಟಿಸಿದೆ. 

ಡೆಂಘಿ ಹಾಗೂ ಚಿಕುನ್ ಗುನ್ಯಾ ರೋಗಾಣು ವಾಹಕವಾದ ಈಡೀಸ್ ಈಜಿಪ್ಟೀ ಎಂಬ ವಿಧದ ಸೊಳ್ಳೆಗಳಿಂದ ಈ ರೋಗ ಹರಡುತ್ತದೆ. ನಿಂತ ನೀರಿನಲ್ಲಿ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. 

ಸಾಮಾನ್ಯವಾಗಿ ಯಾವುದೇ ರೋಗ ಲಕ್ಷಣಗಳನ್ನು ಹೊಂದಿರದಿದ್ದರೂ, ಒಂದು ವೇಳೆ ರೋಗವು ತೀವ್ರವಾದಲ್ಲಿ ಮುಂದೆ ಹುಟ್ಟುವ ಮಕ್ಕಳಲ್ಲಿ ದೋಷ ಉಂಟು ಮಾಡಬಲ್ಲದು, ಮಾತ್ರವಲ್ಲದೇ ನರಮಂಡಲದ ಮೇಲೆ ತೀವ್ರವಾದ ಪರಿಣಾಮವನ್ನು ಬೀರಬಲ್ಲದು. 

“ಝೀಕಾ ವೈರಸ್ ದೃಢಪಟ್ಟ ರೋಗಿಗಳಿಗೆ ಅವರ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿದಿನ ಅವರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ರೋಗಿಗಳ ದೇಹವು ಚಿಕಿತ್ಸೆಗೆ ಯಾವ ರೀತಿ ಸ್ಪಂದಿಸುತ್ತಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ,” ಎಂದು ಜಿಲ್ಲಾಧಿಕಾರಿ ವಿಕಾಸ್ ಜಿ ಅವರು ಹೇಳಿದ್ದಾರೆ. 

Exit mobile version