ಮಧ್ಯಪ್ರದೇಶ: ಆನ್‌ಲೈನ್ ಆಟದ ಹುಚ್ಚಿನಿಂದ ಬೇಸತ್ತ 11ರ ಬಾಲಕ 9 ವರ್ಷ ಬಾಲಕಿಯನ್ನು ಕಲ್ಲಿನಿಂದ ಜ್ಜಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಮಧ್ಯ ಪ್ರದೇಶದ ಇಂದೊರ್‌ನಲ್ಲಿ ನಡೆದಿದೆ.
ಬಾಲಕ ಮತ್ತು ಬಾಲಕಿ ಇಂದೋರ್‌ನ ಉತ್ತರ ಉಪನಗರವಾದ ಲಾಸುಡಿಯಾದಲ್ಲಿ ಅಕ್ಕಪಕ್ಕದ ಮನೆಯವರಾಗಿದ್ದು, ಲಾಕ್‌ಡೌನ್ ಪ್ರಾರಂಭವಾದಾಗಿನಿಂದಲೂ ಆನ್‌ಲೈನ್ ಗೇಮ್ ಆಡುತ್ತಿದ್ದರು. ಸೋಮವಾರ ಬಾಲಕಿ ರಾತ್ರಿಯಾದರೂ ಮನೆಗೆ ಬಾರದ ಕಾರಣ ಪೋಷಕರು ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡಿಕಿದರು ಬಾಲಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರ ಮೊರೆ ಹೋಗಿದ್ದಾರೆ.
ಬಾಲಕಿಗಾಗಿ ಹುಡುಕಾಟ ನಡೆಸಿದಾಗ ಮನೆಯ ಸಮೀಪವೇ ಆಕೆಯ ಮೃತದೇಹ ಪತ್ತೆಯಾಗಿದೆ. ಅಲ್ಲದೇ ಬಾಲಕಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಿರುವುದು ತಿಳಿದು ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಬಾಲಕ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆನ್‌ಲೈನ್ ಗೇಮ್‌ನಲ್ಲಿ ಬಾಲಕಿಯಿಂದ ನಿರಂತರವಾಗಿ ಸೋತ ಬಾಲಕ ಕೋಪಗೊಂಡು, ಹತ್ತಿರದ ಮೈದಾನಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅವನು ಅವಳ ತಲೆ ಮತ್ತು ಮುಖಕ್ಕೆ ಕೋಪದಿಂದ ಕಲ್ಲುಗಳಿಂದ ಹೊಡೆದಿದ್ದಾನೆ. ಅಲ್ಲದೇ ಆಟದ ವಿಚಾರವಾಗಿ ತನಗೆ ಆಕೆಯ ಮೇಲೆ ಹಲವು ದಿನಗಳಿಂದ ದ್ವೇಷವಿತ್ತು. ಆಕೆ ನನ್ನ ಸಾಕು ಇಲಿಯನ್ನೂ ಕೊಲೆ ಮಾಡಿದ್ದಳು ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
ಬಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಇಂದೋರ್‌ನ ಪೊಲೀಸ್ ಉಪ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಹರಿನಾರಾಯಂಚಾರಿ ಮಿಶ್ರಾ ಹೇಳಿದ್ದಾರೆ.