ನವದೆಹಲಿ, ಅ. 24: ಹೃದಯಾಘಾತಕ್ಕೊಳಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಆಸ್ಪತ್ರೆಯಲ್ಲಿರುವ ಫೋಟೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಪಿಲ್ ದೇವ್ ಅವರಿಗೆ ಆಂಜಿಯೋಪ್ಲಾಸ್ಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ತಮ್ಮ ಮಗಳ ಜೊತೆಗೆ ಕಪಿಲ್ ದೇವ್ ಖುಷಿಯಿಂದ ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ಫೋಟೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಲಾಗಿದೆ. ತಮ್ಮ ಆರೋಗ್ಯಕ್ಕೆ ಹಾರೈಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿರುವ ಕಪಿಲ್ ದೇವ್, ಎಲ್ಲರಿಗೂ ನಮಸ್ಕಾರ. ನಾನೀಗ ಆರೋಗ್ಯವಾಗಿದ್ದೇನೆ. ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣವಾಗಿ ಡಿಸ್ಚಾರ್ಜ್ ಆಗುತ್ತೇನೆ. ಮತ್ತೆ ಗಾಲ್ಫ್ ಆಡಲು ಕಾಯುತ್ತಿದ್ದೇನೆ. ನೀವೆಲ್ಲರೂ ನನಗೆ ಕುಟುಂಬದವರಿದ್ದಂತೆ. ನಿಮ್ಮ ಹಾರೈಕೆಯಿಂದ ನಾನು ಆರೋಗ್ಯದಿಂದಿದ್ದೇನೆ, ಎಲ್ಲರಿಗೂ ಧನ್ಯವಾದಗಳು ಎಂದು ಕಪಿಲ್ ದೇವ್ ಟ್ವೀಟ್ ಮಾಡಿದ್ದಾರೆ.