ಇಂಗ್ಲೆಂಡ್-ವೆಸ್ಟ್ ಇಂಡೀಸ್ ಟೆಸ್ಟ್ : 3ನೇ ದಿನದಾಟಕ್ಕೆ ಮಳೆ ಅಡ್ಡಿ

ಮ್ಯಾನ್‍ಚೆಸ್ಟರ್: ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಆತಿಥೇಯ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ 3ನೇ ದಿನದಾಟ ಸಂಪೂರ್ಣ ಮಳೆಗಾಹುತಿಯಾಯಿತು. ಮ್ಯಾನ್‍ಚೆಸ್ಟರ್‍ನ ಓಲ್ಡ್‍ ಟ್ರಾಫರ್ಡ್‍ನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನದಾಟದ ಆರಂಭಕ್ಕೂ ಮುನ್ನವೇ ಸುರಿದ ಮಳೆಯಿಂದಾಗಿ ದಿನದಾಟಕ್ಕೆ ಅಡ್ಡಿಯಾಯಿತು. 2ನೇ ದಿನದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 32 ರನ್‍ಗಳಿಸಿದ್ದ ವೆಸ್ಟ್ ಇಂಡೀಸ್, 437 ರನ್‍ಗಳ ಹಿನ್ನಡೆಯೊಂದಿಗೆ 3ನೇ ದಿನದಂದು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿತ್ತು. ಆದರೆ ದಿನದಾಟಕ್ಕೆ ಮಳೆ ಅಡ್ಡಿಯಾದ ಕಾರಣದಿಂದ 3ನೇ ದಿನದಾಟ ಒಂದೂ ಎಸೆತ ಕಾಣದೆ ರದ್ದಾಯಿತು. 2ನೇ ಟೆಸ್ಟ್‍ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್, ನಾಯಕ ಬೆನ್ ಸ್ಟೋಕ್ಸ್(176) ಮತ್ತು ಡೊಮಿನಿಕ್ ಸಿಬ್ಲಿ(120) ಭರ್ಜರಿ ಬ್ಯಾಟಿಂಗ್‍ನಿಂದ ಮೊದಲ ಇನ್ನಿಂಗ್ಸ್‍ನಲ್ಲಿ 9 ವಿಕೆಟ್‍ ನಷ್ಟಕ್ಕೆ 469 ರನ್‍ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್ 1 ವಿಕೆಟ್ ನಷ್ಟಕ್ಕೆ 32 ರನ್‍ಗಳಿಸಿದೆ. ಸದ್ಯ 2 ದಿನಗಳ ಆಟ ಬಾಕಿಯಿದ್ದು, ಪಂದ್ಯ ಕುತೂಹಲ ಘಟ್ಟದಲ್ಲಿದೆ.

Exit mobile version