ಮುಂಬೈ, ನ. 11: ಕಳೆದವಾರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದು ಅರ್ನಬ್ಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ನ್ಯಾಯಮೂರ್ತಿ ಡಿವೈ ಚಂದ್ರಚೂಡಾ ಮತ್ತು ಇಂದಿರಾ ಬ್ಯಾನರ್ಜೀ ಅವರನ್ನೊಳಗೊಂಡ ದ್ವಿ-ಸದಸ್ಯ ಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ಅರ್ನಬ್ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತು. 2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಅರ್ನಾಬ್ ಗೋಸ್ವಾಮಿ ಮೇಲಿದೆ. ರಿಪಬ್ಲಿಕ್ ಟಿವಿ ಸ್ಟುಡಿಯೋ ನಿರ್ಮಿಸುವಾಗ ಅನ್ವಯ್ ನಾಯಕ್ ಅವರೇ ಇಂಟೀರಿಯರ್ ಡಿಸೈನಿಂಗ್ ಮಾಡಿಕೊಟ್ಟಿದ್ದರು. ಅದರ ಹಣ ನೀಡದೆ ಸತಾಯಿಸಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಅರ್ನಬ್ ಗೋಸ್ವಾಮಿ ವಿರುದ್ಧ ಕೇಳಿ ಬಂದಿತ್ತು.
ಈ ಪ್ರಕರಣದ ವಿಚಾರವಾಗಿ ಕಳೆದ ವಾರ ಅರ್ನಬ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನೀಡಿ ಎಂದು ಅರ್ನಬ್ ಬಾಂಬೇ ಹೈಕೋರ್ಟ್ಗೆ ಮನವಿ ಮಾಡಿದ್ದರು. ಆದರೆ, ಈ ಮನವಿ ತಿರಸ್ಕರಿಸಿರುವ ನ್ಯಾಯಾಲಯ, ಕೆಳ ಹಂತದ ಕೋರ್ಟ್ಗೆ ತೆರಳಿ ಜಾಮೀನು ಕೋರಬಹುದು ಎಂದು ಹೇಳಿತ್ತು.