ಚಲನಚಿತ್ರ ಭಂಡಾರಕ್ಕೆ ಚಾಲನೆ – ಸುನೀಲ್ ಪುರಾಣಿಕ್

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಧ್ಯೇಯೋದ್ದೇಶಗಳಲ್ಲಿ ಒಂದಾದ `ಚಲನಚಿತ್ರ ಭಂಡಾರ’ದ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಪ್ರಸ್ತುತ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ “ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿ.ಡಿ.ಎ ಚಲನಚಿತ್ರ ಭಂಡಾರ” ಸ್ಥಾಪನೆಗೆ ಚಾಲನೆ ನೀಡಿರುವುದಾಗಿ ಮಾಧ್ಯಮ ಗೋಷ್ಠಿಯ ಮೂಲಕ ತಿಳಿಸಿದ್ದಾರೆ.

“ಚಲನಚಿತ್ರ ಅಕಾಡೆಮಿಯ ಸ್ಥಾಪನೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಆರ್ಥಿಕನೆರವು ಕೋರಲಾಯಿತು. ಮನವಿಗೆ ಸ್ಪಂದಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಚಲನಚಿತ್ರ ಭಂಡಾರ ಸ್ಥಾಪನೆಗೆ ಒಪ್ಪಿ ಈಗಾಗಲೇ 1 ಕೋಟಿ ರೂಪಾಯಿ ಅನುದಾನವನ್ನು ಅಕಾಡೆಮಿಗೆ ನೀಡಿದೆ. ಹಣವನ್ನು ನಿಶ್ಚಿತ ಠೇವಣಿಯಲ್ಲಿ ತೊಡಗಿಸಿ ಇದರಿಂದ ಬರುವ ಬಡ್ಡಿ ಹಣದಿಂದ ಚಲನಚಿತ್ರ ಭಂಡಾರದ ನಿರ್ವಹಣೆ ಮಾಡಲು ಕರಾರು ಮಾಡಿಕೊಂಡಿದೆ.

ಈ ಚಲನಚಿತ್ರ ಭಂಡಾರವನ್ನು ನಂದಿನಿ ಲೇಔಟ್‍ನ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಛೇರಿ ಇರುವ ಕನ್ನಡ ಚಲನಚಿತ್ರ ಅಮೃತೋತ್ಸವ ಭವನದ ನೆಲ ಮಹಡಿಯಲ್ಲಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಸರ್ಕಾರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಒಪ್ಪಿಗೆ ನೀಡಿದೆ.

ಚಲನಚಿತ್ರ ಭಂಡಾರದ ಸಜ್ಜುಗೊಳಿಸುವಿಕೆಯ ಸಲಹೆ ಅಭಿಪ್ರಾಯಕ್ಕಾಗಿ ಈ ಕ್ಷೇತ್ರದಲ್ಲಿ ಪರಿಣಿತರಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್, ಹಿರಿಯ ಪತ್ರಕರ್ತ ಮುರಳೀಧರ ಖಜಾನೆ, ಬೆಂಗಳೂರು ನಗರ ಇತಿಹಾಸಕಾರ ಸುರೇಶ್ ಮೂನ, ಕಲಾ ನಿರ್ದೇಶಕ ಅರುಣ್ ಸಾಗರ್, ನಿರ್ದೇಶಕ ಅಶೋಕ್ ಕಶ್ಶಪ್ ಮೊದಲಾದವರನ್ನು ಒಳಗೊಂಡ “ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿ.ಡಿ.ಎ ಚಲನಚಿತ್ರ ಭಂಡಾರ” ಸಲಹಾ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯು ಈಗಾಗಲೇ ಎರಡು ಬಾರಿ ಸಭೆ ಸೇರಿ ಹಲವಾರು ಸಲಹೆ ಅಭಿಪ್ರಾಯಗಳನ್ನು ನೀಡಿದೆ.ಅದರನ್ವಯ ಪೂನಾದಲ್ಲಿರುವ ಭಾರತದ ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ ಮತ್ತು ಮುಂಬೈಯಲ್ಲಿರುವ ಭಾರತೀಯ ಚಲನಚಿತ್ರಗಳ ರಾಷ್ಟ್ರೀಯ ಸಂಗ್ರಹಾಲಯ ಮಾದರಿಯಲ್ಲಿ “ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿ.ಡಿ.ಎ ಚಲನಚಿತ್ರ ಭಂಡಾರ” ಸ್ಥಾಪಿಸಲು ಉದ್ದೇಶಿಸಿದ್ದು, ಅತ್ಯಂತ ತ್ವರಿತಗತಿಯಲ್ಲಿ ಈ ಚಲನಚಿತ್ರ ಭಂಡಾರ ಸ್ಥಾಪಿಸಲಾಗುತ್ತದೆ ಎಂದು ಪುರಾಣಿಕ್ ಭರವಸೆ ನೀಡಿದರು.

ಕನ್ನಡದ ಹಾಗೂ ಜಗತ್ತಿನ ಎಲ್ಲಾ ಭಾಷೆಗಳ ಶ್ರೇಷ್ಠ ಚಲನಚಿತ್ರಗಳನ್ನು ಸಂಗ್ರಹಿಸಿ ಇಡುವ ಯೋಜನೆ ಇದಾಗಿದ್ದು, ಅದನ್ನು ಡಿಜಿಟಲ್ ಮಾಡಿಸಿ ಆಸಕ್ತರು, ಸಂಶೋಧಕರು ವೀಕ್ಷಿಸಲು ಅನುಕೂಲ ಮಾಡಿಕೊಡಬೇಕಾಗಿದೆ. ಅದಕ್ಕಾಗಿ ಚಲನಚಿತ್ರ ಪ್ರಿಂಟ್‍ಗಳು, ಬೀಟಾ ಪ್ರತಿಗಳು, ಪ್ರಚಾರದ ಸ್ಥಿರಚಿತ್ರಗಳು, ಹಾಡುಗಳ ಪುಸ್ತಕಗಳು, ಕರಪತ್ರಗಳು, ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಪುಸ್ತಕಗಳು, ಸ್ಥಿರಚಿತ್ರಗಳು ಲಾಬಿ ಕಾಡ್ರ್ಸ್, ಒಟ್ಟಿನಲ್ಲಿ ರಾಜ್ಯದ ಚಲನಚಿತ್ರ ಸಂಸ್ಕೃತಿಗೆ ಸಂಬಂಧಿಸಿದಂತೆ ಸಿಗುವ ಎಲ್ಲವನ್ನು ಸಂಗ್ರಹಿಸಬೇಕಾಗಿದೆ. ಆದ್ದರಿಂದ ಚಲನಚಿತ್ರ ಸಂಬಂಧಿತ ಎಲ್ಲ ಸಂಗ್ರಹಯೋಗ್ಯ ವಸ್ತುಗಳನ್ನು ಸಂಗ್ರಹಿಸಲು ಅಕಾಡೆಮಿ ಉದ್ದೇಶಿಸಿದೆ.

ತಮ್ಮಲ್ಲಿ ಸಂಗ್ರಹಯೋಗ್ಯವಾದ ಅಪರೂಪದ ಕನ್ನಡ ಚಲನಚಿತ್ರಗಳ ಪ್ರಿಂಟ್‍ಗಳು, ಭಿತ್ತಿಪತ್ರಗಳು, ಹಾಡು ಮತ್ತು ಗೀತೆಗಳು, ಅಪ್ರಕಟಿತ ಪುಸ್ತಕಗಳು, ಚಿತ್ರಕಥೆ ಮತ್ತು ಸಂಭಾಷಣೆಗಳು, ಚಲನಚಿತ್ರ ಸಂಬಂಧಿತ ಪುಸ್ತಕಗಳು, ಕೊಡವ, ಕೊಂಕಣಿ, ಬಂಜಾರ, ತುಳು ಮತ್ತು ಬ್ಯಾರಿ ಸೇರಿದಂತೆ ಕರ್ನಾಟಕದ ಇತರ ಭಾಷೆಗಳಲ್ಲಿ ತಯಾರಾದ ಚಲನಚಿತ್ರಗಳಿಗೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ ತಮ್ಮಲ್ಲಿರುವ ಸಂಗ್ರಹಯೋಗ್ಯ ವಸ್ತುಗಳನ್ನು ನೀಡಲು ಕೋರಲಾಗಿದೆ.

Exit mobile version