ಡ್ರಗ್ಸ್ ಜಾಲ: ತನಿಖೆಗಿಂತ ಪ್ರಚಾರವೇ ಬಹಳ..!

ಡ್ರಗ್ಸ್ ವಿಚಾರದಲ್ಲಿ ನಿತ್ಯವೂ ಹೊಸ ಹೊಸ ಹೆಸರುಗಳು ಹೊರಗೆ ಬರುತ್ತಿರುವುದು ಉತ್ತಮ. ಯಾಕೆಂದರೆ ಅದು ತನಿಖೆ ಮುಂದುವರಿಯುತ್ತಿರುವುದರ ಸೂಚನೆ. ಆದರೆ ಹೆಸರುಗಳು ತೀರ ಸೆಲೆಕ್ಟಿವ್ ಆಗಿದೆಯಾ ಎನ್ನುವುದು ಸದ್ಯದ ವಿಷಯ. ಯಾಕೆಂದರೆ ಎಲ್ಲರೂ ಒಪ್ಪುವ ಹಾಗೆ ಡ್ರಗ್ಸ್ ಹರಡಿದೆ ಎನ್ನುವುದು ಇಂದು ನಿನ್ನೆಯ ವಿಚಾರವಲ್ಲ. ಇದು ಬಹಳ ಕಾಲದಿಂದ ನಡೆಯುತ್ತಿರುವ ವ್ಯವಹಾರ. ಇದನ್ನು ಬೇರು ಸಮೇತ ಪತ್ತೆ ಮಾಡುವುದು ಬಿಟ್ಟು ನಿನ್ನೆ ಮೊನ್ನೆ ಅರಳಿದ ಚಿಗುರುಗಳತ್ತ ಗಮನ ಹರಿಸುವಂತೆ ಮಾಡಲಾಗುತ್ತಿದೆ. ಇದರಿಂದ ಬೇರುಗಳು ಶಾಶ್ವತವಾಗಿ ಭೂಗತವಾಗಲಿದೆ ಎನ್ನುವ ಆತಂಕ ಕಾಡಿದೆ.

ಮೊದಲನೆಯದಾಗಿ ಡ್ರಗ್ಸ್ ಎನ್ನುವುದು ಚಿತ್ರರಂಗದ ಜತೆಯಲ್ಲೇ ಇಡೀ ಸಮಾಜಕ್ಕೆ ಅಂಟಿಕೊಂಡಿರುವುದಾಗಿ ಸಮಾಜದ ಪ್ರಮುಖರೆಲ್ಲ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಆದರೂ ಚಿತ್ರರಂಗವನ್ನು ಮಾತ್ರ ಟಾರ್ಗೆಟ್ ಮಾಡಿದಂತೆ ತನಿಖೆ ನಡೆಯುತ್ತಿದೆ. ಒಂದು ವೇಳೆ ಚಿತ್ರರಂಗದಲ್ಲಿ ಅಷ್ಟು ವ್ಯಾಪಕವಾಗಿದ್ದರೆ ಖಂಡಿತವಾಗಿ ತನಿಖೆಯಾಗಬೇಕು. ಆದರೆ ಆ ತನಿಖೆಗಳು ಕೂಡ ಆಳಕ್ಕೆ ಇಳಿದಂತೆ ಕಾಣುವುದಿಲ್ಲ. ಒಬ್ಬ ನಟಿಯನ್ನು ಮಾತ್ರ ಟಾರ್ಗೆಟ್ ಮಾಡಿಕೊಂಡು ತನಿಖೆ ಆರಂಭವಾಯಿತು. ಬಳಿಕ ಅದು ಇಬ್ಬರಿಗೆ ಹಬ್ಬಿತು.

ಆನಂತರ ಇನ್ನೊಂದು ಜೋಡಿಯನ್ನು ಕರೆಸಲಾಯಿತು. ಮತ್ತೊಬ್ಬ ಯುವ ನಟ, ನಿರೂಪಕ.. ಹೀಗೆ ಪಟ್ಟಿ ಬೆಳೆಯುತ್ತಾ ಹೋಯಿತು. ರಾಗಿಣಿ, ಸಂಜನಾ, ಐಂದ್ರಿತಾ, ಅಕುಲ್ ಇವರೆಲ್ಲರನ್ನು ಗಮನಿಸಿದಾಗ ಮೂಲತಃ ಇವರು ಕನ್ನಡಿಗರಲ್ಲ ಎನ್ನುವುದು ಮೊದಲು ಸೆಳೆಯುವ ವಿಚಾರ. ಹಾಗಂತ ಊರು ಬಿಟ್ಟು ಬಂದವರು ಧೈರ್ಯದಿಂದ ಇಲ್ಲಿ ವ್ಯವಹಾರ ಶುರು ಮಾಡಿದ್ದಾರೆ ಎನ್ನುವುದಕ್ಕೆ ಆಧಾರವಿಲ್ಲ.

ಆದರೆ ಆ ಆಧಾರ ಹುಡುಕುವ ಹೊತ್ತಿಗೆ ಇವರ ಹೆಸರುಗಳೆಲ್ಲ ಡ್ರಗ್ಸ್ ಸಂಬಂಧದಲ್ಲಿ ದೊಡ್ಡ ಮಟ್ಟದಲ್ಲೇ ತಳುಕು ಹಾಕಿದೆ, ಅದು ಮಾಧ್ಯಮಗಳ ಮೂಲಕ. ಸಂಬಂಧವೇ ಇರದೆ ಹೆಸರು ಬರಲಾರದು ನಿಜ. ಆದರೆ ಅದು ಯಾವ ರೀತಿಯ ಸಂಬಂಧ ಎನ್ನುವುದನ್ನು ಮರೆ ಮಾಚುವ ಮಟ್ಟಕ್ಕೆ ಒಂದು ಸಂಘಟಿತ ಪ್ರಯತ್ನ ನಡೆಯುತ್ತಿರುವುದು ವಿಪರ್ಯಾಸ.

ಉದಾಹರಣೆಗೆ ಎರಡು ದಿನಗಳಿಂದ ಸುದ್ದಿಯಲ್ಲಿರುವ ಕಿಶೋರ್ ವಿಚಾರವನ್ನೇ ಗಮನಿಸಿ. ಮಂಗಳೂರಿನಲ್ಲಿ ಆತ ವಾಸವಾಗಿರುವ ಪುಟ್ಟ ಮನೆ ಕಂಡವರು ಮತ್ತು ಆತನ ಅಕ್ಕಪಕ್ಕದ ಮನೆಯವರು ಹೇಳುವ ಪ್ರಕಾರ ಆತ ಪ್ರತಿ ರೂಪಾಯಿಗಳಿಗೂ ಕಷ್ಟ ಪಡುತ್ತಿದ್ದ.

ಅಕ್ಕಪಕ್ಕದ ಮನೆಗಳಲ್ಲೇ ನೂರು ಇನ್ನೂರು ಸಾಲ ಮಾಡುತ್ತಿದ್ದ. ಒಂದು ವೇಳೆ ನಿಜಕ್ಕೂ ಡ್ರಗ್ ಪೆಡ್ಲರ್ ಆಗಿದ್ದರೆ ಆತನಿಗೆ ಅಂಥ ಪರಿಸ್ಥಿತಿ ಬರುತ್ತಿತ್ತೇ? ಆದರೆ ಮಾಧ್ಯಮಗಳು ಆತನನ್ನು ಶೋಕಿಲಾಲ ಎನ್ನುವಂತೆ ಬಿಂಬಿಸುತ್ತವೆ. ಮಾಧ್ಯಮಗಳು ಆರೋಪಿಯ ಬೆನ್ನು ಹತ್ತುವುದು ತಪ್ಪಲ್ಲ. ಆದರೆ ನಿಜವಾದ ಮಾಹಿತಿ ನೀಡುವ ಬದಲು ಟಿಆರ್ಪಿಗಾಗಿ ರಂಜನೆಯ ಕತೆ ಕಟ್ಟುತ್ತಿರುವುದು ಮಾತ್ರ ವಿಪರ್ಯಾಸ.

ಪ್ರಮುಖವಾಗಿ ಇಲ್ಲಿ ರಾಜಕೀಯದ ಆಟ ನಡೆಯುತ್ತಿದೆ. ರಾಜಕಾರಣಿಗಳ ಹೆಸರು ಕೇಳಿ ಬಂದರು ಕೂಡ ಅದರಲ್ಲಿಯೂ ಸೆಲೆಕ್ಟಿವ್ ಆಗಿದ್ದಾರೆ ಅನಿಸುತ್ತದೆ. ಜಮೀರ್ ಅಹಮದ್ ಕ್ಯಾಸಿನೋದಲ್ಲಿ ಪಾಲ್ಗೊಂಡ ಕಾರಣಕ್ಕಾಗೊ ದೊಡ್ಡ ಸುದ್ದಿಯಾಗುತ್ತಾರೆ.

ಆದರೆ ಆದರೆ ಆರ್ ಅಶೋಕ್ ಅವರು ಡ್ರಗ್ ಪೆಡ್ಲರ್ ಬಾಯಿಗೆ ಕೈ ತುತ್ತು ನೀಡಿದರೆ ಸುದ್ದಿಯಾಗುವುದಿಲ್ಲ. ಪರಭಾಷೆಯಿಂದ ಬಂದು ಹೆಸರು ಮಾಡಿದ ತೋರಿಕೆಯ ಸಮಾಜ ಸೇವೆಯನ್ನೂ ಮಾಡಿದ ನಟಿಯರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಆದರೆ ಅದೇ ಪರಭಾಷೆಯ ಯುವತಿಯ ಕೈ ಹಿಡಿದ ದಿಗಂತ್ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಸ್ವಾಮೀಜಿಯೊಬ್ಬರು ಜಿಗಿದುಕೊಂಡು ಬರುತ್ತಾರೆ.

ಇಲ್ಲಿ ಜಾತಿ ರಾಜಕಾರಣ, ಧರ್ಮ ರಾಜಕಾರಣ ಎದ್ದು ನಿಂತಿರುವುದು ಸ್ಪಷ್ಟವಾಗುತ್ತದೆ. ಅದೇ ರೀತಿಯಲ್ಲಿ ಕಿಶೋರ್ ಬಗ್ಗೆ ಗಮನಿಸಿದರೆ ಆತನ ಜಾತಿಯ ವಿಚಾರ ಕೂಡ ಮಾಧ್ಯಮಗಳಿಗೆ ಮುಖ್ಯವಾಗುತ್ತದೆ! ಆತ ಶೆಟ್ಟಿ ಅಲ್ಲ ಎನ್ನುವುದನ್ನು ಬಿಂಬಿಸಲು ಪ್ರಯತ್ನಿಸುತ್ತಾರೆ. ಇವೆಲ್ಲವನ್ನು ನಂಬಿಕೊಂಡವರಿಗೆ ಮೂಲ ಅಪರಾಧಿಗಳು ಕಣ್ಣಿಗೆ ಕಾಣಿಸುವುದೇ ಇಲ್ಲ.

ಖಾಸಗಿಯಾಗಿ ಮಾತನಾಡುವಾಗ ತುಂಬ ಮಂದಿ ರಾಜಕಾರಣಿಗಳ ಮಕ್ಕಳ ಬಗ್ಗೆ ಮಾತನಾಡಲಾಗುತ್ತಿದೆ. ಆದರೆ ಅಧಿಕೃತವಾಗಿ ಮಾತನಾಡಲು ಎಲ್ಲರೂ ಹೆದರುತ್ತಾರೆ. ಕೋಟಿಗಟ್ಟಲೆ ಗಾಂಜಾ ಸಾಗಾಟ ನಡೆಸುವ ಟ್ರಕ್ ದೊರಕಿದ್ದು ಸುದ್ದಿಯಾಗಿತ್ತು. ಆದರೆ ಆ ಟ್ರಕ್ ಮಾಲೀಕ ಒಬ್ಬ ರಾಜಕಾರಣಿಯಾಗಿದ್ದು ಆತನ ಹೆಸರನ್ನು ಪೊಲೀಸರು ಹೊರಗೆ ಹಾಕಲೇ ಇಲ್ಲ! ಮೊದಲು ಅಂಥ ರಾಜಕಾರಣಿಗಳನ್ನು ಒಳಗೆ ಹಾಕಿ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶಗಳು ಬೇಗ ಹೊರಗೆ ಬರಬಹುದು. ಭಾರತದ ಪೊಲೀಸ್ ವ್ಯವಸ್ಥೆ ಚೆನ್ನಾಗಿದೆ.

ಆದರೆ ರಾಜಕಾರಣಿಗಳ ಮೂಗು ತೂರಿಸುವಿಕೆ ಇದಕ್ಕೆ ತೊಂದರೆಯಾಗಿದೆ. ಒಂದು ರೀತಿ ಈ ಹಗರಣ ನಿಧಾನಗತಿಯಲ್ಲಿ ಸಾಗಿದಷ್ಟು ಮಾಧ್ಯಮಗಳಿಗೆ ಮತ್ತು ಗಾಸಿಪ್‌ ಪ್ರಿಯ ಜನತೆಗೆ ಖುಷಿಯೇ! ಅಧಿಕಾರದಲ್ಲಿರುವ ಕೈಲಾಗದ ರಾಜಕಾರಣಿಗಳಿಗೂ ಇದೇ ಬೇಕು! ಕೊರೊನಾ ಲಾಕ್ಡೌನ್ ಮೂಲಕ ವಲಸೆ ಕಾರ್ಮಿಕರು ಎಷ್ಟು ಮಂದಿ ಸತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇರದ ಕಾರ್ಮಿಕ ಸಚಿವರನ್ನು ಹೊಂದಿರುವ ಸರ್ಕಾರಕ್ಕೆ ಈಗ ಪ್ರಶ್ನಿಸುವವರೇ ಇಲ್ಲ. ಇಲ್ಲಿ ಸಂದೇಹವನ್ನೇ ಅಪರಾಧ ಮಾಡಿರುವಾಗ ಪ್ರಶ್ನೆಗಳಿಗೆ ಅವಕಾಶವಾದರೂ ಎಲ್ಲಿದೆ ಹೇಳಿ?

ಬೆಳದಿಂಗಳು

Exit mobile version