ವಾಷಿಂಗ್ಟನ್, ನ. 11: ಇಡೀ ವಿಶ್ವಕ್ಕೆ ದೊಡ್ಡಣ್ಣನಾದ ಅಮೆರಿಕದಲ್ಲಿ ಹೊಸ ಇತಿಹಾಸ ನಿರ್ಮಿಸಿರುವ ಭಾರತೀಯ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಬಗ್ಗೆ ಭಾರತೀಯರು ಹೆಮ್ಮೆ ಪಡುವಂತಹ ಸಂದರ್ಭವಾಗಿದೆ ಇಂದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾ ಪ್ರವಾಹವೇ ಹರಿಯುತ್ತಿದೆ.
ಭಾರತ -ಜಮೈಕಾ ಮೂಲದ ಕಮಲಾ ಹ್ಯಾರಿಸ್ ಅಮೆರಿಕಾದ ಮೊದಲ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಈ ಸುಸಂದರ್ಭದಲ್ಲಿ, ಭಾರತೀಯರೊಂದಿಗೆ, ಜಮೈಕಾ ಜನರು ತಮ್ಮ ಹೆಣ್ಣುಮಗಳ ಸಾಧನೆ ಕಂಡು ಸಂತಸ ಪಟ್ಟು ಅಭಿನಂದಿಸುತ್ತಿದ್ದಾರೆ.
‘ಸೆಕೆಂಡ್ ಜಂಟಲ್ಮ್ಯಾನ್’ ಸ್ಥಾನಮಾನ ಹೊಂದಲಿರುವ ಕಮಲಾ ಹ್ಯಾರಿಸ್ ಅವರ ಪತಿ ಡಗ್ಲಾಸ್ ಎಮಾಫ್ ಅವರಿಗೂ ಜಾಲತಾಣಗಳಲ್ಲಿ ಶುಭಾಶಯ ಕೋರುತ್ತಿದ್ದಾರೆ. ಈ ಕ್ರಮದಲ್ಲಿ ಡಗ್ಲಾಸ್ ಹಂಚಿಕೊಂಡ ಫೋಟೋ ವನ್ನು ಲಕ್ಷಾಂತರ ಜನರು ಮಚ್ಚುಗೆ ಸೂಚಿಸುತ್ತಿದ್ದಾರೆ. ಅಟಾರ್ನಿ ಜನರಲ್, ಸೆನೆಟರ್ ಆಗಿ ಪ್ರಮುಖ ಹುದ್ದೆಯನ್ನು ನಿರ್ವಹಿಸುತ್ತಿದ್ದ ಪತ್ನಿ ಹ್ಯಾರಿಸ್ ಈಗ ದೇಶದ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಗೌರವದ ಶಿಖರ ಏರಿರುವುದಕ್ಕೆ ಅತ್ಯಂತ ಹೆಮ್ಮೆ ಎನಿಸುತ್ತಿದೆ ಎಂದು ಅವರು ಸಂತೋಷಪಟ್ಟಿದ್ದಾರೆ.
ಈ ಸಂಬಂಧ ಕಮಲಾ ಹ್ಯಾರಿಸ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಡಗ್ಲಾಸ್ ಹಂಚಿಕೊಂಡಿದ್ದು, “ನಿನ್ನನ್ನು ನೋಡಿ ನನ್ನಲ್ಲಿ ಹೆಮ್ಮೆ ಮೂಡಿದೆ’ ಎಂಬ ಭಾವನಾತ್ಮಕ ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟಿಜನ್ಗಳು, ಇಡೀ ಅಮೆರಿಕ ಕಮಲಾ ಹ್ಯಾರಿಸ್ ಬಗ್ಗೆ ಹೆಮ್ಮೆ ಪಡುತ್ತದೆ. ಒಬ್ಬ ಮಹಿಳೆಯಾಗಿ, ಅದರಲ್ಲೂ ಕಪ್ಪು ಮಹಿಳೆಯಾಗಿ ಅವರ ಯಶಸ್ಸು ಅನೇಕರಿಗೆ ಸ್ಪೂರ್ತಿದಾಯಕವಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
ಡೆಮಾಕ್ರೆಟಿಕ್ ಪಕ್ಷದ ಪ್ರಮುಖ ನಾಯಕಿಯಾಗಿ ಮಹಿಳಾ ಒಬಾಮ ಎಂದು ಜನಪ್ರಿಯವಾಗಿರುವ ಕಮಲಾ ಹ್ಯಾರಿಸ್ ತಮ್ಮ ಸಹ ವಕೀಲ ಡಗ್ಲಾಸ್ ಎಮಾಫ್ ಅವರನ್ನು ವಿವಾಹವಾಗಿದ್ದರು. ಡಗ್ಲಾಸ್ ಅವರ ಮೊದಲ ಪತ್ನಿಯ ಇಬ್ಬರು ಹೆಣ್ಣು ಮಕ್ಕಳಿಗೆ ಹ್ಯಾರಿಸ್ ತಾಯಿಯ ಪ್ರೀತಿ ಹಂಚುತ್ತಿದ್ದಾರೆ.
ಜೋ ಬೈಡನ್ ಅವರು ತಮ್ಮನ್ನು ಉಪಾಧ್ಯಕ್ಷೆ ಅಭ್ಯರ್ಥಿ ಎಂದು ಘೋಷಿಸಿದ ನಂತರ ಕಮಲಾ ಹ್ಯಾರಿಸ್ ಅವರು ಮೊದಲ ಭಾಷಣದಲ್ಲಿಯೇ ತಮ್ಮ ಕುಟುಂಬವನ್ನು ಜಗತ್ತಿಗೆ ಪರಿಚಯಿಸಿದ್ದರು. ನನ್ನ ಪತಿ ಡಗ್ಲಾಸ್, ನಮಗೆ ರತ್ನದಂತಹ ಹೆಣ್ಣು ಮಕ್ಕಳಾದ ಎಲಾ, ಮತ್ತು ಕೋಲ್ ಇದ್ದಾರೆ ಎಂದು ತಮ್ಮ ಕುಟುಂಬವನ್ನು ಜಗತ್ತಿಗೆ ಪರಿಚಯಿಸಿ ಖುಷಿ ಪಟ್ಟಿದ್ದಾರೆ.