ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕಂಡ ಕನಸು ಇಂದು ನನಸಾಗಿದೆ. ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಎಂಬ ಹಿರಿಮೆಗೆ ಪಾತ್ರವಾಗಿರುವ 9.02 ಕಿ.ಮೀ ಉದ್ದದ ಮನಾಲಿ-ಲೇಹ್ ನಡುವಿನ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು.
ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದ ಹಿಮಾಚಲಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಸುರಂಗ ಮಾರ್ಗಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲಾಗಿದೆ. ಈ ಸುರಂಗವು ಮನಾಲಿ ಹಾಗೂ ಲೇಹ್ ನಗರಗಳ ನಡುವಣ ಅಂತರ 46 ಕಿ.ಮೀ.ಯಷ್ಟು ತಗ್ಗಿಸಲಿದೆ. ಪ್ರಯಾಣದ ಅವಧಿ 4ರಿಂದ 5 ತಾಸಿನಷ್ಟು ಉಳಿತಾಯವಾಗಲಿದೆ.
ವ್ಯೂಹಾತ್ಮಕವಾಗಿ ಮಹತ್ವವಾಗಿರುವ ಈ ಯೋಜನೆಗೆ 2002ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಚಾಲನೆ ನೀಡಿತ್ತು. 2002ರಲ್ಲಿ ಅಡಿಗಲ್ಲು ಹಾಕಲಾಗಿದ್ದ ಈ ಕಾಮಗಾರಿ 3300 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿದೆ. 2040 ರಲ್ಲಿ ಪೂರ್ಣಗೊಳ್ಳಬೇಕಿದ್ದ ಈ ಸುರಂಗವು 2014ರ ನಂತರದ ಚುರುಕುತನದ ಕಾಮಗಾರಿಯಿಂದಾಗಿ ಇಂದು ಲೋಕಾರ್ಪಣೆಗೊಂಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಎಮ್. ಎಮ್. ನರವಾನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಶೇಷತೆಗಳು
9.02 ಕಿ.ಮೀ. ಸುರಂಗದ ಉದ್ದ
5 ತಾಸು: ಸುರಂಗದಿಂದ ಅವಧಿ ಉಳಿತಾಯ
46 ಕಿ.ಮೀ.: ಮನಾಲಿ, ಲೇಹ್ ನಡುವಣ ಅಂತರ ಇಳಿಕೆ
- ಕುದುರೆ ಲಾಳಾಕೃತಿಯ ದ್ವಿಪಥ ಮಾರ್ಗವನ್ನು ಈ ಸುರಂಗ ಹೊಂದಿದೆ.
- 8 ಮೀ. ಅಗಲದ ರಸ್ತೆ. 5.525 ಮೀ. ಎತ್ತರದ ವಾಹನ ಚಲಿಸಬಹುದು.
- ನಿತ್ಯ 3000 ಕಾರು, 1500 ಲಾರಿಗಳ ಸಂಚಾರಕ್ಕೆ ಅವಕಾಶ.
- ಗರಿಷ್ಠ 80 ಕಿ.ಮೀ. ವೇಗದಲ್ಲಿ ಸಾಗಬಹುದು.
- ಸರ್ವಋುತು ಸುರಂಗ ಮಾರ್ಗವಾಗಿದ್ದು ಹಿಮಪಾತ ವೇಳೆಯೂ ವಾಹನಗಳು ಸಂಚರಿಸಬಹುದು.
- 150 ಮೀಟರ್ಗಳಿಗೊಂದು ಟೆಲಿಫೋನ್ ವ್ಯವಸ್ಥೆ.
- ಪ್ರತೀ 1 ಕಿ.ಮೀ.ಗೊಂದು ಗಾಳಿ ಶುದ್ಧತೆಯ ಪರೀಕ್ಷಾ ವ್ಯವಸ್ಥೆ.
- ಪ್ರತೀ 250 ಮೀಟರ್ಗೊಂದು ಬ್ರಾಡ್ಕಾಸ್ಟ್ ವ್ಯವಸ್ಥೆ, ಸಿಸಿ ಕ್ಯಾಮೆರಾ, ಸ್ವಯಂಚಾಲಿತ ಅನಾಹುತ ಘಟನಾ ಪತ್ತೆ ವ್ಯವಸ್ಥೆ.