2ನೇ ಟೆಸ್ಟ್: ನ್ಯೂಜಿ಼ಲೆಂಡ್ ತಂಡಕ್ಕೆ ಭರ್ಜರಿ ಜಯ

ಕ್ರೈಸ್ಟ್ ಚರ್ಚ್, ಜ. 06: ಯುವ ವೇಗದ ಬೌಲರ್ ಕೈಲ್ ಜೇಮಿಸನ್(48ಕ್ಕೆ 6) ಬೌಲಿಂಗ್ ನೆರವಿನಿಂದ ಪ್ರವಾಸಿ ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 176 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ನ್ಯೂಜಿ಼ಲೆಂಡ್, 2-0 ಅಂತರದಲ್ಲಿ ಟೆಸ್ಟ್ ಸರಣಿ ಮುಡಿಗೇರಿಸಿಕೊಂಡಿತು.

ಇಲ್ಲಿನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ಪಂದ್ಯದ 4ನೇ ದಿನದಾಟದಲ್ಲಿ ಕಿವೀಸ್ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮ ಪ್ರವಾಸಿ ಪಾಕಿಸ್ತಾನ ತಂಡವನ್ನು ಕೇವಲ 186 ರನ್‌ಗಳಿಗೆ ಕಟ್ಟಿಹಾಕಿದ ನ್ಯೂಜಿ಼ಲೆಂಡ್, ಇನ್ನಿಂಗ್ಸ್ ಹಾಗೂ 176 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು 297 ರನ್‌ಗಳಿಗೆ ಆಲೌಟ್ ಮಾಡಿದ ಕಿವೀಸ್, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 659 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಪರಿಣಾಮ ಪ್ರಥಮ ಇನ್ನಿಂಗ್ಸ್‌ನಲ್ಲಿ 362 ರನ್‌ಗಳ ಭಾರೀ ಮುನ್ನಡೆ ಸಾಧಿಸಿತು. ಈ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನ 3ನೇ ದಿನದಂತ್ಯಕ್ಕೆ 14 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು. ಬುಧವಾರ ದಿನದಾಟ ಆರಂಭಿಸಿದ ಪಾಕಿಸ್ತಾನ, ನ್ಯೂಜಿ಼ಲೆಂಡ್ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ಪರಿಣಾಮ ಕೇವಲ 186 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಆಘಾತ ಅನುಭವಿಸಿತು. ನ್ಯೂಜಿ಼ಲೆಂಡ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿ ಮೊದಲ ಇನ್ನಿಂಗ್ಸ್‌ನಲ್ಲಿ 69ಕ್ಕೆ 5 ವಿಕೆಟ್ ಪಡೆದಿದ್ದ ಕೈಲ್ ಜೇಮಿಸನ್, 2ನೇ ಇನ್ನಿಂಗ್ಸ್‌ನಲ್ಲೂ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿ 48ಕ್ಕೆ 6 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಅಲ್ಲದೇ ಸರಣಿಯಲ್ಲಿ ತಮ್ಮ ಬೌಲಿಂಗ್ ಮೂಲಕ ಗಮನ ಸೆಳೆದ ಜೇಮಿಸನ್, ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ. ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಕೇನ್ ವಿಲಿಯಂಸನ್ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇನ್ನೂ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ಗೆಲುವು ಸಾಧಿಸಿದ ನ್ಯೂಜಿ಼ಲೆಂಡ್ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 118 ರೇಟಿಂಗ್ ಪಾಯಿಂಟ್ಸ್ ನೊಂದಿಗೆ ನಂ.1 ಸ್ಥಾನಕ್ಕೇರಿದರೆ. ಆಸ್ಟ್ರೇಲಿಯಾ 2 ಹಾಗೂ ಭಾರತ 3ನೇ ಸ್ಥಾನದಲ್ಲಿದೆ.

Exit mobile version