2ನೇ ಟೆಸ್ಟ್: ಟೀಂ ಇಂಡಿಯಾ ಬೌಲಿಂಗ್‌ಗೆ ಆಸೀಸ್ ತತ್ತರ

ಮೆಲ್ಬೋರ್ನ್, ಡಿ. 26: ಟೀಂ ಇಂಡಿಯಾ ಬೌಲರ್‌ಗಳ‌ ಸಾಂಘಿಕ ಪ್ರದರ್ಶನಕ್ಕೆ‌ ತತ್ತರಿಸಿದ ಆಸ್ಟ್ರೇಲಿಯಾ, ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್‌ಗಳಿಗೆ ಸರ್ವಪತನ ‌ಕಂಡಿದ್ದು, ಉತ್ತಮ ಪ್ರದರ್ಶನ ನೀಡಿದ ಭಾರತ ಮೊದಲ ದಿನದ ಗೌರವ ತನ್ನದಾಗಿಸಿಕೊಂಡಿದೆ.

ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಶನಿವಾರ ಆರಂಭವಾದ ಎರಡನೇ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತೀಯ ‌ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಟಾಸ್ ಗೆದ್ದು ‌ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾಕ್ಕೆ ಭಾರತೀಯ ಬೌಲರ್‌ಗಳು ಕಡಿವಾಣ ಹಾಕಿದರು.‌ ಪರಿಣಾಮ ಆಸೀಸ್ ಪಡೆ, ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್‌ಗಳಿಗೆ ಆಲೌಟ್ ಆಯಿತು. ಕಾಂಗರೂ ಪರ ಮಾರ್ನಸ್ ಲಬುಸ್ಚಗ್ನೆ 48, ಟ್ರ್ಯಾವಿಸ್ ಹೆಡ್ 38 ಹಾಗೂ ಮ್ಯಾಥ್ಯೂ ವೇಡ್ 30 ರನ್‌ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಬ್ಯಾಟಿಂಗ್ ವೈಫಲ್ಯ ‌ಅನುಭವಿಸಿದರು.

ಭಾರತದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ‌ ವೇಗಿ ‌ಜಸ್ಪ್ರೀತ್ ಬುಮ್ರಾ(56ಕ್ಕೆ‌ 4) ಹಾಗೂ ಆರ್. ಅಶ್ವಿನ್(35ಕ್ಕೆ 3) ಆಸೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ. ಇವರಿಗೆ ಸಾಥ್ ನೀಡಿದ ಮೊಹಮ್ಮದ್‌ ಸಿರಾಜ್(40ಕ್ಕೆ 2) ಚೊಚ್ಚಲ ‌ಪಂದ್ಯದಲ್ಲೇ ವಿಕೆಟ್ ಕಬಳಿಸಿ ಮಿಂಚಿದರು. ‌ಅಂತಿಮವಾಗಿ ರವೀಂದ್ರ ಜಡೇಜಾ(15ಕ್ಕೆ 1) ವಿಕೆಟ್ ಪಡೆದರು.

ಆಸ್ಟ್ರೇಲಿಯಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಟೀಂ ಇಂಡಿಯಾಕ್ಕೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ತಂಡದ ಪರ ಇನ್ನಿಂಗ್ಸ್ ‌ಆರಂಭಿಸಿದ ಮಯಾಂಕ್ ಅಗರ್ವಾಲ್(0) ಸ್ಟಾರ್ಕ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ನಂತರ ಜೊತೆಯಾದ ಶುಭ್ಮನ್ ಗಿಲ್(28) ಹಾಗೂ ಪೂಜಾರ(7) ಎಚ್ಚರಿಕೆಯ ಆಟವಾಡಿದರು. ಪರಿಣಾಮ ಮೊದಲ ದಿನದಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 36 ರನ್‌ಗಳಿಸಿದ್ದು, 159 ರನ್‌ಗಳ ಹಿನ್ನಡೆ ಹೊಂದಿದೆ. ಚೊಚ್ಚಲ ಪಂದ್ಯವಾಡುತ್ತಿರುವ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್, ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದು, ೨ನೇ ದಿನದಂದು ದೊಡ್ಡ ಇನ್ನಿಂಗ್ಸ್ ‌ಕಟ್ಟುವ ನಿರೀಕ್ಷೆ ಮೂಡಿಸಿದ್ದಾರೆ.

Exit mobile version