ಕಳೆದ 24 ಗಂಟೆಗಳಲ್ಲಿ 32,937 ಹೊಸ ಕೋವಿಡ್ ಕೇಸ್: 145ದಿನಗಳಲ್ಲಿ ಕಡಿಮೆ ಸಕ್ರಿಯ ಪ್ರಕರಣಗಳು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 32,937 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,22,25,513ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಇದೇ ಅವಧಿಯಲ್ಲಿ 417 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದು, ಮೃತರ ಒಟ್ಟು ಸಂಖ್ಯೆಯು 4,31,642ಕ್ಕೆ ಏರಿದೆ. ಆದರೆ, ಸಕ್ರಿಯ ‍ಪ್ರಕರಣಗಳ ಸಂಖ್ಯೆ 3,81,947 ಇಳಿದಿದ್ದು, ಇದು 145 ದಿನಗಳ ಬಳಿಕ ವರದಿಯಾದ ಅತಿ ಕಡಿಮೆ ಸಕ್ರಿಯ ಪ್ರಕರಣಗಳಾಗಿವೆ.ದೇಶದಲ್ಲಿ ಚೇತರಿಕೆ ಪ್ರಮಾಣವು ಶೇಕಡ 97.48ರಷ್ಟಿದೆ. ಇದು ಕಳೆದ ವರ್ಷ ಮಾರ್ಚ್‌ ತಿಂಗಳಿನಿಂದ ಈವರೆಗಿನ ಅತಿ ಗರಿಷ್ಠ ಚೇತರಿಕೆ ಪ್ರಮಾಣವಾಗಿದೆ. ಇನ್ನು, ಭಾರತದ ದೈನಂದಿನ ಸೋಂಕು ದೃಢ ಪ್ರಮಾಣವು ಶೇಕಡ 2.79ರಷ್ಟಿದೆ.

ದೇಶದಲ್ಲಿ ಮರಣ ಪ್ರಮಾಣವು ಶೇಕಡ 1.34 ರಷ್ಟಿದ್ದು, ಈವರೆಗೆ 3,14,11,924 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.ಭಾನುವಾರ 11,81,212 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ದೇಶದಲ್ಲಿ 49,48,05,652 ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ. ಜತೆಗೆ, 54.58 ಕೋಟಿ ಡೋಸ್‌ ಲಸಿಕೆಯನ್ನು ವಿತರಿಸಲಾಗಿದೆ.

Exit mobile version