Hassan: ಹಾಸನ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದ (Hassan Pendrive Case) ಸಂತ್ರಸ್ತ ಮಹಿಳೆಯ ಅಪಹರಣ ಆರೋಪ ಕೇಸ್ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜೈಲು ಸೇರಿದ್ದು, ಜಾಮೀನು ಸಿಗದ ಕಾರಣ ಕೋರ್ಟ್ ಆವರಣದಲ್ಲೇ ಕಣ್ಣೀರಿಟ್ಟಿದ್ದ ರೇವಣ್ಣ ಜೈಲಿನಲ್ಲೂ ಚಡಪಡಿಸಿದ್ದಾರೆ. ಈ ಮಧ್ಯೆ ಹೆಚ್.ಡಿ.ರೇವಣ್ಣರ ಮನೆಯಲ್ಲಿ ಮತ್ತೊಮ್ಮೆ ಸಂತ್ರಸ್ತೆಯರಿಂದ SIT ಸ್ಥಳ ಮಹಜರು ನಡೆಸಿದೆ.
ಮಾಜಿ ಸಚಿವ ಹೆಚ್.ಡಿ.ರೇವಣ್ಣ, (H D Revanna) ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಮೊನ್ನೆ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ರೇವಣ್ಣಗೆ ಕೋರ್ಟ್ ನಿರಾಸೆ ಉಂಟು ಮಾಡಿದ್ದು, ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಹೆಚ್.ಡಿ. ರೇವಣ್ಣ, ಕಳೆದ 4 ದಿನಗಳಿಂದ ಸೆರೆವಾಸ ಅನುಭವಿಸುತ್ತಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಕಾಲಕಳೆಯುತ್ತಿದ್ದಾರೆ. ಮೇ 14ರವರೆಗೆ ನ್ಯಾಯಾಂಗ ಬಂಧನ ಆದೇಶದಿಂದ ಸೆರೆವಾಸ ಅನುಭವಿಸುತ್ತಿದ್ದಾರೆ. ಜೈಲಲ್ಲಿ ನಿನ್ನೆಯೂ ಜೈಲು ಅಧಿಕಾರಿಗಳು ಕೊಟ್ಟ ಊಟವನ್ನೇ ರೇವಣ್ಣ ಸೇವಿಸಿದ್ದಾರೆ. ಮೇ 13ರಂದು ಕೋರ್ಟ್ನಿಂದ ಜಾಮೀನು ಸಿಗುತ್ತೆ ಎಂಬ ಯೋಚನೆಯಲ್ಲಿ ರೇವಣ್ಣ ಕಾಲಕಳೆಯುತ್ತಿದ್ದಾರೆ.
ರೇವಣ್ಣ ನಿವಾಸದಲ್ಲಿ ಮತ್ತೊಮ್ಮೆ ಸ್ಥಳ ಮಹಜರು
ಬೆಂಗಳೂರಿನಲ್ಲಿರೋ (Bengaluru) ಮಾಜಿ ಸಚಿವ ರೇವಣ್ಣ ನಿವಾಸದಲ್ಲಿ ಎರಡನೇ ಬಾರಿಗೆ ಪೊಲೀಸರು ಸ್ಥಳ ಮಹಜರು ಮಾಡಿದ್ದು, ಎರಡು ಜೀಪಿನಲ್ಲಿ ಸಂತ್ರಸ್ತೆಯರನ್ನ ಕರೆತಂದ ಅಧಿಕಾರಿಗಳು ಮನೆಯಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ವಿಡಿಯೋಗ್ರಫಿ ಮೂಲಕ ಸಂತ್ರಸ್ತೆಯ ಹೇಳಿಕೆಗಳನ್ನ ದಾಖಲಿಸಿದ್ದಾರೆ. ಮನೆಯ ಹಾಲ್, ಪಾರ್ಕಿಂಗ್, (Hall, Parking) ಅಡುಗೆ ಮನೆ, ಬಾಲ್ಕನಿ, ಸೇರಿ ಹಲವು ಕಡೆ ಮಹಜರು ಮಾಡಿದ್ದು, ಫೋಟೋ ಎವಿಡೆನ್ಸ್ ಕೂಡಾ ಕಲೆಹಾಕುತ್ತಿದ್ದಾರೆ.