ಕೇಂದ್ರದಿಂದ ರಾಜ್ಯಗಳಿಗೆ ಮಹತ್ವದ ಸುತ್ತೋಲೆ ; ಸರ್ಕಾರಿ ಸವಲತ್ತುಗಳು ಹಾಗೂ ಸಬ್ಸಿಡಿಯನ್ನು ಪಡೆಯಲು ಆಧಾರ್ ಕಡ್ಡಾಯ!

ಆಧಾರ್(Aadhar) ಎನ್ನುವುದು 12 ಸಂಖ್ಯೆಯುಳ್ಳ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ಇದನ್ನು ಭಾರತದ ನಾಗರಿಕರು ಮತ್ತು ವಿದೇಶದಲ್ಲಿ ವಾಸಿಸುವ ನಾಗರಿಕರು ಸ್ವಯಂಪ್ರೇರಣೆಯಿಂದ ಪಡೆಯಬಹುದು. ಈಗಂತೂ ಆಧಾರ್ ಕಾರ್ಡ್(Aadhar Card) ಪ್ರತಿಯೊಬ್ಬ ಭಾರತೀಯ ನಾಗರಿಕನ ಪ್ರಮುಖ ವೈಯಕ್ತಿಕ ದಾಖಲೆಗಳಲ್ಲಿ ಒಂದಾಗಿದೆ.

ಆಧಾರ್ ಕಾರ್ಡ್‌ಗಳನ್ನು ನೀಡುವ ಹೊಣೆ ಹೊತ್ತಿರುವುದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಎಂದರೆ UIDAI.
ಇದೀಗ UIDAI ಒಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದು, ಇತ್ತೀಚಿನ ಸುತ್ತೋಲೆಯಂತೆ ಇನ್ನು ಮುಂದೆ ಸರ್ಕಾರಿ ಸಬ್ಸಿಡಿಗಳು(Subsidy) ಮತ್ತು ಪ್ರಯೋಜನಗಳನ್ನು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ!

ಇದಿಲ್ಲದಿದ್ದರೆ, ಆಧಾರ್‌ ದಾಖಲಾತಿ ಚೀಟಿಯಾದರೂ ಇರಲೇಬೇಕು. ಆಧಾರ್‌ ಸಂಖ್ಯೆ ಇಲ್ಲದಿದ್ದರೆ ಸರ್ಕಾರದ ಯಾವುದೇ ಸವಲತ್ತು ಹಾಗೂ ಸಬ್ಸಿಡಿಗಳು ಸಿಗುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಯುಐಡಿಎಐ ಕಳೆದ ವಾರ ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ(State Governments) ಈ ಸುತ್ತೋಲೆಯನ್ನು ಹೊರಡಿಸಿದೆ.


ನಿಮ್ಮ ಬಳಿ ಆಧಾರ್ ಸಂಖ್ಯೆ ಇಲ್ಲದಿದ್ದರೆ ಅಥವಾ ಇನ್ನೂ ಆಧಾರ್‌ಗಾಗಿ ನೋಂದಣಿ ಮಾಡಿಸಿಲ್ಲ ಎಂದರೆ ಈಗಲೇ ಎಚ್ಚೆತ್ತುಕೊಳ್ಳುವುದು ಒಳಿತು. ಏಕೆಂದರೆ ನಿಮ್ಮ ಬಳಿ ಆಧಾರ್ ಇಲ್ಲದಿದ್ದರೆ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಯುಐಡಿಎಐ ಹೊರಡಿಸಿದ ಸುತ್ತೋಲೆಯ ಪ್ರಕಾರ ಆಧಾರ್ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಆಧಾರ್ ಕಾಯ್ದೆಯ ಸೆಕ್ಷನ್ 7ರ ಅನ್ವಯ ಆಧಾರ್ ಇಲ್ಲದ ವ್ಯಕ್ತಿಗೂ ಕೂಡ ಸರ್ಕಾರಿ ಸೌಲಭ್ಯಗಳ ಒದಗಿಸಲು ನಿಯಮ ಅವಕಾಶ ಕೊಡುತ್ತದೆ.

ಆದರೆ ಅಂತಹ ವ್ಯಕ್ತಿ ಪರ್ಯಾಯ ಗುರುತಿನ ವಿಧಾನಗಳ ಮೂಲಕ ಸರ್ಕಾರದ ಪ್ರಯೋಜನಗಳು, ಸಬ್ಸಿಡಿಗಳು ಮತ್ತು ಸೇವೆಗಳನ್ನು ಪಡೆಯಬೇಕಾಗುತ್ತದೆ. ಆದರೆ, ದೇಶದ 90 ಪ್ರತಿಶತ ವಯಸ್ಕರು ಆಧಾರ್ ಸಂಖ್ಯೆಯನ್ನು ಹೊಂದಿದ್ದಾರೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಆಧಾರ್ ಕಾಯಿದೆಯ ಸೆಕ್ಷನ್ 7ರ ಪ್ರಕಾರ, ಒಬ್ಬ ವ್ಯಕ್ತಿ ಇನ್ನೂ ಆಧಾರ್ ಸಂಖ್ಯೆಯನ್ನು ಪಡೆಯದಿದ್ದಲ್ಲಿ, ಅವನು ಅದಕ್ಕೆ ಅರ್ಜಿ ಸಲ್ಲಿಸಬಹುದು.

ಆದರೆ ಆತನಿಗೆ ಆಧಾರ್ ಸಂಖ್ಯೆ ಸಿಗುವವರೆಗೂ, ಆಧಾರ್ ನೋಂದಣಿ ಗುರುತಿನ ಸಂಖ್ಯೆಯ ಜೊತೆ ಪರ್ಯಾಯ ಗುರುತಿನ ವಿಧಾನಗಳ ಮೂಲಕ ಸರ್ಕಾರದ ಪ್ರಯೋಜನಗಳು, ಸಬ್ಸಿಡಿಗಳು ಮತ್ತು ಸೇವೆಗಳನ್ನು ಪಡೆಯಬಹುದು. ಸರಳವಾಗಿ ಹೇಳುವುದಾದರೆ, ನೀವು ಇನ್ನೂ ಆಧಾರ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ, ಸರ್ಕಾರಿ ಸೇವೆ ಅಥವಾ ಸಬ್ಸಿಡಿ ಪಡೆಯಲು ತಕ್ಷಣವೇ ಆಧಾರ್ ಅನ್ನು ನೋಂದಾಯಿಸಬೇಕಾಗುತ್ತದೆ. ಆಧಾರ್ ಸಂಖ್ಯೆ ಲಭ್ಯವಾಗುವವರೆಗೂ ನೋಂದಣಿ ಸ್ಲಿಪ್ ತೋರಿಸಿ ಸರ್ಕಾರಿ ಸೇವೆಗಳನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.

Exit mobile version