ಚೆನ್ನೈ : ತಮಿಳುನಾಡಿನ(Tamilnadu) ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲಾ(Government School) ಮುಖ್ಯೋಪಾಧ್ಯಾಯಿನಿ ಸ್ವಾತಂತ್ರ್ಯ ದಿನಾಚರಣೆ(Independence Day) ದಿನದಂದು ರಾಷ್ಟ್ರಧ್ವಜಾರೋಹಣ ಹಾಗೂ ಗೌರವ ವಂದನೆ ಸಲ್ಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿದೆ.

ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ತಮಿಳ್ಸೆಲ್ವಿ ಆಗಸ್ಟ್ 15 ರಂದು ರಾಷ್ಟ್ರಧ್ವಜಾರೋಹಣ ಹಾಗೂ ಗೌರವ ವಂದನೆ ಸಲ್ಲಿಸಲು ನಿರಾಕರಿಸಿದ್ದಾರೆ. ಹೀಗಾಗಿ ಸಹಾಯಕ ಮುಖ್ಯಶಿಕ್ಷಕಿಯೇ ಧ್ವಜಾರೋಹಣ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ನಾನು ಕ್ರಿಶ್ಚಿಯನ್ ಆಗಿದ್ದು, ದೇವರಿಗೆ ಮಾತ್ರ ನಮಸ್ಕರಿಸುತ್ತೇನೆ. ಬೇರೆ ಯಾರಿಗೂ ನಾನು ನಮಸ್ಕರಿಸುವುದಿಲ್ಲ. ನಾನು ರಾಷ್ಟ್ರ ಧ್ವಜವನ್ನು ಗೌರವಿಸುತ್ತೇನೆ, ಧ್ವಜದ ಬಗ್ಗೆ ಯಾವುದೇ ಅಗೌರವವನ್ನು ಹೊಂದಿಲ್ಲ.
ಆದರೆ ನಾನು ದೇವರಿಗೆ ಮಾತ್ರ ನಮಸ್ಕರಿಸುತ್ತೇನೆ ಮತ್ತು ವಂದಿಸುತ್ತೇನೆ. ಆದ್ದರಿಂದ, ನಾನು ಆಗಸ್ಟ್ 15 ರಂದು ರಾಷ್ಟ್ರಧ್ವಜಾರೋಹಣ ಮಾಡಲು ಸಹಾಯಕ ಮುಖ್ಯೋಪಾಧ್ಯಾಯಿನಿಗೆ ಸೂಚಿಸಿದ್ದೇನೆ ಎಂದು ತಮಿಳ್ಸೆಲ್ವಿ ಹೇಳಿದ್ದಾರೆ. ಈ ಘಟನೆಯ ಕುರಿತು ಧರ್ಮಪುರಿಯ ಮುಖ್ಯ ಶಿಕ್ಷಣಾಧಿಕಾರಿಗೆ ದೂರನ್ನು ನೀಡಿ, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣವನ್ನು ನಿರಾಕರಿಸಿದ ಘಟನೆಯನ್ನು ಸ್ಥಳೀಯರು ಬೆಳಕಿಗೆ ತಂದಿದ್ದಾರೆ.

ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಮಿಳ್ಸೆಲ್ವಿ ಅನಾರೋಗ್ಯ ಸೇರಿದಂತೆ ಯಾವುದಾದರೂ ಕಾರಣ ನೀಡಿ ರಜೆ ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯೋಪಾಧ್ಯಾಯಿನಿ ತಮಿಳ್ಸೆಲ್ವಿ ಸರ್ಕಾರಿ ಸಂಸ್ಥೆಯಲ್ಲಿ ಒಂದು ಧರ್ಮದ ಬಗ್ಗೆ ಒಲವು ಪ್ರದರ್ಶಿಸಿರುವುದು ಅಕ್ಷಮ್ಯ ಅಪರಾಧ ಎಂದು ಸ್ಥಳೀಯರು ದೂರಿದ್ದಾರೆ.
ಮುಖ್ಯೋಪಾಧ್ಯಾಯಿನಿ ಈ ನಡೆಯ ಕುರಿತು ತಮಿಳುನಾಡಿನಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಸರ್ಕಾರಿ ಸಂಸ್ಥೆಗಳಲ್ಲಿರುವ ಅಂತಹ ಧರ್ಮಾಂಧರನ್ನು ಹತ್ತಿಕ್ಕಬೇಕು ಎಂಬ ಆಗ್ರಹ ಕೇಳಿ ಬಂದಿದೆ.