ಅಚ್ಛೇ ದಿನ ಬರಲಿಲ್ಲ ಸಚ್ಛೇ ದಿನವಾದರೂ ಬರುವುದೇ?? ದೇಶಪ್ರೇಮಿಗಳೆಲ್ಲ ಆ ನಾಳೆಗಾಗಿ ಕಾದು ನೋಡುವ ಎಂದು ನಟ ಕಿಶೋರ್ ಕುಮಾರ್ (Actor Kishore Kumar) ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಎಲೆಕ್ಟೊರಲ್ ಬಾಂಡಿನ (Electoral Bond) ವಿವರ ಕೊಡಲು 5 ತಿಂಗಳು ಬೇಕೆಂದು ಕಳ್ಳ ನಾಟಕವಾಡಿ ಪ್ರಜಾಪ್ರಭುತ್ವದ ವಿರುದ್ಧ ಪ್ರಮುಖ ಲಾಭಾರ್ಥಿ ಮೋದಿ ಸರ್ಕಾರದ ಜೊತೆ ಕೈಜೋಡಿಸಿದ ಎಸ್ ಬಿ ಐ (SBI), ಸುಪ್ರೀಂ ಛಡಿಯೇಟಿಗೆ ಒಂದೇ ದಿನದಲ್ಲಿ ಚುನಾವಣಾ ಆಯೋಗಕ್ಕೆ ವಿವರ ಕಳಿಸಿದೆ ಎಂದು ನೇರವಾಗಿ ಪ್ರಧಾನಿ ಮೋದಿ (Modi) ಹಾಗೂ ಕೇಂದ್ರ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಹಾಭ್ರಷ್ಟಾಚಾರದ ಬಾಂಡ್… ಎಲೆಕ್ಟೊರಲ್ ಬಾಂಡ್ .. ಎಲೆಕ್ಟೊರಲ್ ಬಾಂಡಿನ ವಿವರ ಕೊಡಲು 5 ತಿಂಗಳು ಬೇಕೆಂದು ಕಳ್ಳ ನಾಟಕವಾಡಿ ಪ್ರಜಾಪ್ರಭುತ್ವದ ವಿರುದ್ಧ ಪ್ರಮುಖ ಲಾಭಾರ್ಥಿ ಮೋದಿ ಸರ್ಕಾರದ ಜೊತೆ ಕೈಜೋಡಿಸಿದ ಎಸ್ ಬಿ ಐ, ಸುಪ್ರೀಂ (SBI, Supreme Court) ಛಡಿಯೇಟಿಗೆ ಒಂದೇ ದಿನದಲ್ಲಿ ಚುನಾವಣಾ ಆಯೋಗಕ್ಕೆ ವಿವರ ಕಳಿಸಿದೆ. ಆ ನರಸತ್ತ ಆಯೋಗ ( ಇಬ್ಬರು ಆಯುಕ್ತರು ರಿಸೈನ್ ಮಾಡಿ ಇವರ ಕೈಗೊಂಬೆ ಮುಖ್ಯ ಆಯುಕ್ತನ ಜೊತೆ ಇನ್ನಿಬ್ಬರು ಹೌದಪ್ಪಗಳು ಬಂದು ಕೂತಿರುವಾಗ) ಪೂರ್ತಿ ವಿವರ ಕೊಡುತ್ತದೆಯೆಂದು ನಂಬುವುದು ಹೇಗೆ?? ಎಂದು ಪ್ರಶ್ನಿಸಿದ್ದಾರೆ.
ಅದು ಹಾಗೆ ಕೊಟ್ಟುಬಿಟ್ಟರೂ ಇಡೀ ದೇಶಕ್ಕೆ ಧರ್ಮದ ದ್ವೇಷದ ಮಂಕುಬೂದಿಯೆರಚಿ ಮರುಳು ಮಾಡಿದ ದುರಹಂಕಾರಿಗಳು, ಇವರು ಮಾಡುವ ಎಲ್ಲ ಧಂದೆಗಳನ್ನೂ ಸರಿಯೆಂದು ವಾದಿಸುವ ಇವರ ನೆಕ್ಕುವ ಮಾಧ್ಯಮದೊಂದಿಗೆ ಸೇರಿ, ರಫೇಲ್ ವಿಮಾನಗಳನ್ನೂ, ಪಿ ಎಮ್ ಕೇರ್ಸ್ ನ ಗಂಟುಗಳನ್ನೂ ಅಡಾನಿಯ ಗುಡಾಣಗಳನ್ನೂ, ಕೊರೋನ (Corona), ಮಣಿಪುರ, ಕೃಷಿ ಕಾನೂನು, ಅಗ್ನಿವೀರ್, ನಗದು ಅಮಾನ್ಯಕರಣದಂಥಾ ಮಹಾ ಪ್ರಮಾದಗಳನ್ನೂ ಶಂಕರಾಚಾರ್ಯರುಗಳಂಥಾ ಧರ್ಮಗುರುಗಳನ್ನೇ ನುಂಗಿ ಜೀರ್ಣಿಸಿಕೊಂಡ ಬೃಹಸ್ಪತಿಗಳು ಇದನ್ನೂ ಜೀರ್ಣಿಸಿಕೊಂಡಾರೇ? ಎಂದು ಕಿಡಿಕಾರಿದ್ದಾರೆ.