ಅದೆಷ್ಟೋ ನಟಿಮಣಿಯರು ತೆರೆಯ ಮೇಲೆ ಮಿಂಚಿ, ಪರಿಪೂರ್ಣ ನಾಯಕಿಯರಾಗಿ ಹೊರಹೊಮ್ಮುತ್ತಾರೆ. ಆದರೆ, ನಿಜ ಜೀವನದಲ್ಲಿ ನಾಯಕಿಯರಾಗಲು ವಿಫಲರಾಗಿರುತ್ತಾರೆ. ಇದಕ್ಕೆ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಇನ್ನೂ ನಿಜ ಜೀವನದ ಹೀರೋ ಅಂದ್ರೆ, ನಮ್ಮ ದೇಶಕ್ಕಾಗಿ ತಮ್ಮ ಪ್ರಾಣ ಕೊಟ್ಟು ನಮ್ಮೆಲ್ಲರ ರಕ್ಷಣೆಗಾಗಿ ಹೋರಾಡುವ ಸೈನಿಕರು ಹಾಗೂ ಅನ್ನದಾತ ರೈತ ಅನ್ನೋದು ಎಲ್ಲರೂ ಹೆಮ್ಮೆ ಇಂದ ಹೇಳುವ ಮಾತು.
ಆದರೆ ಇಲ್ಲೊಬ್ಬರು ನಟಿ ತಾನು ಸಿನಿಮಾದಲ್ಲಿ ಮಾತ್ರ ಅಲ್ಲ, ನಿಜ ಜೀವನದಲ್ಲಿಯೂ ನಾಯಕಿ ಎಂದು ತೋರಿಸಿಕೊಟ್ಟಿದ್ದಾರೆ. ಸಿನಿಮಾದಲ್ಲಿ ನಟಿಸುತ್ತಿದ್ದವರು, ಈಗ ದೇಶದ ಸೈನ್ಯಕ್ಕೆ ಸೇರಿ ಅವರ ಕುಟುಂಬದ ಜೊತೆ ದೇಶಕ್ಕೂ ಗೌರವ ಘನತೆ ಹೆಚ್ಚಿಸಿದ್ದಾರೆ. ತಮಿಳಿನಲ್ಲಿ ಕಡಂಪರೈ ಸಿನಿಮಾದಲ್ಲಿ ನಟಿಸಿ ಮೆಚ್ಚುಗೆ ಪಡೆದು ಎಲ್ಲರ ಗಮನ ಸೆಳೆದಿದ್ದ ಅಖಿಲಾ ನಾರಾಯಣನ್. ಇವರು ಮೂಲತಃ ಅಮೆರಿಕದವರಾಗಿದ್ದು, ಅಲ್ಲಿಯೇ ಶಿಕ್ಷಣ ಪಡೆದು, ತರಬೇತಿ ಮುಗಿಸಿ ಈಗ ಅಮೆರಿಕಾದ ಸೈನ್ಯ ಸೇರಿದ್ದಾರೆ. ಅಖಿಲಾ ನಟಿಸಿದ್ದ ‘ಕಡಂಪರೈ’ ತಮಿಳು ಸಿನಿಮಾ ಕಳೆದ ವರ್ಷವಷ್ಟೆ ಬಿಡುಗಡೆಯಾಗಿತ್ತು.
ಹಾರರ್ ಸಿನಿಮಾ ಜಾನರ್ ಆಗಿದ್ದ ‘ಕಡಂಪರೈ’ ಅನ್ನು ಅರುಲ್ ನಿರ್ದೇಶನ ಮಾಡಿದ್ದರು. ಅಮೇರಿಕ ಸೈನ್ಯಕ್ಕೆ ವಕೀಲೆಯಾಗಿ ಅಖಿಲಾ ನಾರಾಯಣನ್ ಸೇವೆ ಸಲ್ಲಿಸಲಿದ್ದು, ಇದಕ್ಕಾಗಿ ಬೇಕಾದ ಪೂರ್ಣ ತರಬೇತಿ ಹಾಗೂ ಪರೀಕ್ಷೆಗಳನ್ನು ಅಖಿಲಾ ಮುಗಿಸಿದ್ದಾರೆ. ಬಹು ವರ್ಷಗಳಿಂದ ತಂದೆ-ತಾಯಿಯೊಂದಿಗೆ ಅಮೆರಿಕದಲ್ಲಿಯೇ ನೆಲೆಸಿರುವ ಅಖಿಲಾ, ಸೈನ್ಯಕ್ಕೆ ಸೇರಬೇಕೆಂಬ ಕನಸ್ಸನ್ನು ಬಹಳ ವರ್ಷಗಳಿಂದಲೂ ಹೊಂದಿದ್ದರಂತೆ. ಸೈನ್ಯಕ್ಕೆ ಸೇರಿರುವ ಅಖಿಲಾ, ಅಮೇರಿಕಾದಲ್ಲಿ ‘ನೈಟಿಂಗೇಲ್ ಸ್ಕೂಲ್ ಆಫ್ ಮ್ಯೂಸಿಕ್’ ಎಂಬ ಆನ್ಲೈನ್ ಸಂಗೀತ ಶಾಲೆಯನ್ನು ಕೂಡ ನಡೆಸುತ್ತಾರೆ. ಈ ಮೂಲಕ ನಟಿ ಅಖಿಲ ನಾರಾಯಣ್ ಎಲ್ಲರಿಗೂ ಮಾದರಿಯಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಬಹುದು.