ಒಂದೇ ತಲೆಯಲ್ಲಿ ಆನೆ ಹಾಗೂ ಗೂಳಿ ಎರಡೂ ಕಾಣಿಸುವ ಅಪರೂಪದ ಶಿಲ್ಪಕಲೆ `ಈ’ ರಾಜ್ಯದಲ್ಲಿದೆ!

ತಮಿಳುನಾಡು(Tamilnadu) ವಿಶಿಷ್ಟವಾದ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ದೇವಾಲಯಗಳು(Temple) ಆಗಿನಿಂದ ಈಗಿನವರೆಗೂ ತನ್ನ ವಿಶಿಷ್ಟ ವಾಸ್ತುಶಿಲ್ಪ ಶೈಲಿಯಿಂದ ದೇಶವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಾ ಪ್ರಸಿದ್ಧಿಯಾಗಿದೆ.

ತಮಿಳುನಾಡಿನ ದಾರಾಸುರಂ(Darasurum) ಪಟ್ಟಣವು ಇಲ್ಲಿರುವ ಐರಾವತೇಶ್ವರ ದೇವಾಲಯಕ್ಕೆ(Airavatheshwara Temple) ಪ್ರಸಿದ್ಧವಾದದ್ದು. ಇದು ಪ್ರಸಿದ್ಧ ಯಾತ್ರಾ ಸ್ಥಳವಾದ ತಂಜಾವೂರಿನ ಕುಂಭಕೋಣಂನ(Kumbakonam) ಹತ್ತಿರವಿದೆ. ಚೋಳರ(Cholas) ದೊರೆ ಎರಡನೇ ರಾಜ ಚೋಳನ ಕಾಲದಲ್ಲಿ ಈ ಐರಾವತೇಶ್ವರ ದೇವಾಲಯವನ್ನು ನಿರ್ಮಿಸಲಾಯಿತು. ತಮಿಳುನಾಡಿನ ಇತರ ಚೋಳ ದೇವಾಲಯಗಳಂತೆ, ಇದನ್ನು ಸಹ ಭಗವಾನ್ ಶಿವನಿಗೆ ಸಮರ್ಪಿಸಲಾಗಿದೆ.


ಈ ದೇವಾಲಯದಲ್ಲಿ ನೆಲೆಸಿರುವುದು ಐರಾವತೇಶ್ವರ ಸ್ವಾಮಿ. ಐರಾವತೇಶ್ವರ ದೇವಸ್ಥಾನದಲ್ಲಿ ನೀರಿನ ತೊಟ್ಟಿ ಇದೆ. ಈ ನೀರಿನ ತೊಟ್ಟಿಗೆ ಕಾವೇರಿ ನದಿಯಿಂದ ನೀರು ಬರುತ್ತದೆ. ಐರಾವತ ಇಂದ್ರನ ಬಿಳಿ ಆನೆಯು ಈ ತೊಟ್ಟಿಯಲ್ಲಿ ಸ್ನಾನ ಮಾಡಿದ ನಂತರ ಬಿಳಿ ಚರ್ಮವನ್ನು ಪಡೆಯಿತು ಎಂದು ಪುರಾಣ ತಿಳಿಸುತ್ತದೆ. ಈ ದಂತಕಥೆ ಚಿತ್ರಣವನ್ನು ದೇವಾಲಯದ ಒಳಗಿನ ಗೋಡೆಯಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ. ಪುರಾಣಗಳ ಪ್ರಕಾರ, ಭಗವಾನ್ ಇಂದ್ರನ ಆನೆಯಾದ ಐರಾವತ, ಇಲ್ಲಿ ಶಿವನನ್ನು ಪೂಜಿಸಿದನು.

ದೂರ್ವಾಸ ಋಷಿಯನ್ನು ಗೌರವಿಸದ ಕಾರಣ ಶಾಪಗ್ರಸ್ತನಾದ ನಂತರ, ಯಮತೀರ್ಥಂನ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ ನಂತರವೇ ಆನೆ ಶಾಪದಿಂದ ಮುಕ್ತವಾಯಿತು. ಕಳಂಕವಿಲ್ಲದ ಐರಾವತನು ಮತ್ತೆ ಬಿಳಿ ಬಣ್ಣದ ಆನೆಯಾಗಿ ಬದಲಾಯಿತು. ಹೀಗಾಗಿ ಈ ದೇವಾಲಯಕ್ಕೆ ಐರಾವತೇಶ್ವರ ದೇವಾಲಯ ಎಂಬ ಹೆಸರು ಬಂತು. ಯಮಧರ್ಮರಾಯ ಕೂಡ ಇಲ್ಲಿ ಶಿವನನ್ನು ಪೂಜಿಸುತ್ತಿದ್ದ ಎಂದು ನಂಬಲಾಗಿದೆ. ಋಷಿಯೊಬ್ಬರಿಂದ ಶಾಪಗ್ರಸ್ತನಾದ ಯಮ, ದೇವಾಲಯದ ಪವಿತ್ರ ತೊಟ್ಟಿಯಲ್ಲಿ ಸ್ನಾನ ಮಾಡಿ ಗುಣಮುಖನಾದನು.

ಹಾಗಾಗಿ ಈ ದೇವಾಲಯದ ತೊಟ್ಟಿಗೆ ಯಮತೀರ್ಥಂ ಎಂದು ಹೆಸರಿಡಲಾಗಿದೆ. 12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯವು ವಾಸ್ತುಶಿಲ್ಪದ ಸುವರ್ಣ ಯುಗದ ಪ್ರತೀಕವಾಗಿದೆ. ಯುನೆಸ್ಕೋ ಇದನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ. ಐರಾವತೇಶ್ವರ ದೇವಾಲಯವು ತಂಜಾವೂರಿನಿಂದ 35 ಕಿ.ಮೀ ದೂರದಲ್ಲಿದೆ. ತಂಜಾವೂರು ಮತ್ತು ದಾರಾಸುರಂನಲ್ಲಿನ ದೇವಾಲಯಗಳನ್ನು ಚೋಳರ ಕಾಲದಲ್ಲೇ ನಿರ್ಮಿಸಿರುವುದರಿಂದ ಇವುಗಳ ವಾಸ್ತುಶಿಲ್ಪವು ಒಂದೇ ರೀತಿಯಲ್ಲಿದೆ.

ಐರಾವತೇಶ್ವರ ದೇವಾಲಯದ ವಿಶೇಷತೆಯೆಂದರೆ ಒಂದೇ ತಲೆಯಲ್ಲಿ ಆನೆ ಹಾಗೂ ಗೂಳಿ ಕಾಣಿಸುವ ಅದ್ಭುತ ಶಿಲ್ಪಕಲೆ. ಆಗಿನ ಕಾಲದಲ್ಲಿಯೇ ಇಂತಹ ಶಿಲ್ಪವನ್ನು ಕೆತ್ತುವ ಚಾಕಚಕ್ಯತೆಯಿತ್ತು ಎನ್ನುವುದು ಅಚ್ಚರಿಯ ವಿಚಾರ!

Exit mobile version