ಬೊಮ್ಮಾಯಿ ನಾಯಕತ್ವದಲ್ಲಿ 2023ರ ಚುನಾವಣೆಗೆ ಬಿಜೆಪಿ ಸಜ್ಜು

ದಾವಣಗೆರೆ ಸೆ 3 : ಬಸವರಾಜ  ಬೊಮ್ಮಾಯಿ ಅವರ ನಾಯಕತ್ವದಲ್ಲಿ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಎದುರಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ದಾವಣಗೆರೆಯ ಗಾಂಧಿ ಭವನ ಉದ್ಘಾಟನೆ, ಪೊಲೀಸ್ ಪಬ್ಲಿಕ್ ಸ್ಕೂಲ್ ಉದ್ಘಾಟನೆ ಹಾಗೂ ಜಿ.ಎಂ.ಐ.ಟಿ. ಕೇಂದ್ರ ಗ್ರಂಥಾಲಯದ ಉದ್ಘಾಟನೆ ನೆರವೇರಿಸಿ ಜಿಎಂಐಟಿ ಕ್ಯಾಂಪಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಮತ್ತೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಲಿದ್ದು, ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಮತ್ತೆ ಕರ್ನಾಟಕಕ್ಕೆ ಬರುತ್ತೇನೆ ಮತ್ತು ಇಲ್ಲಿನ ಅಭಿವೃದ್ದಿಗಳ ಕುರಿತು ಚರ್ಚಿಸುತ್ತೇನೆ ಎಂದ ಅವರು ಕರ್ನಾಟಕದಲ್ಲಿ ಅಭಿವೃದ್ದಿಕಾಲ ಯಡಿಯೂರಪ್ಪನವರ ಅವಧಿಯಿಂದಲೇ ಪ್ರಾರಂಭವಾಗಿದೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಸಲಹೆಯೊಂದಿಗೆ ಹಾಗೂ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಅಮಿತ್ ಶಾ ತಿಳಿಸಿದರು.

ಲಿಂಗಾಯುತ ಮತಗಳು ಒಡೆಯದಂತೆ ಈಗಲೇ ನಾಯಕತ್ವ ಘೋಷಣೆ ?

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಬಳಿಕ ಕೆಲವು ಲಿಂಗಾಯಿತರಿಗೆ ಬಿಜೆಪಿ ಬಗ್ಗೆ ಒಲವು ಕಡಿಮೆಯಾಗಿದ್ದು, ಈ ಹಿನ್ನಲೆಯಲ್ಲಿ ಚುನಾವಣೆಗೆ ಒಂದೂವರೆ  ವರ್ಷಕ್ಕಿಂತ ಮುಂಚೆಯೇ ನಾಯಕತ್ವ ಘೋಷಣೆ ಮಾಡಿದರೆ ಲಿಂಗಾಯಿತ ಮತಗಳನ್ನು ಉಳಿಸಿಕೊಳ್ಳಬಹುದು ಎಂಬುವುದು ಅಮಿತ್ ಶಾ ಲೆಕ್ಕಾಚಾರವಾಗಿದೆ.

Exit mobile version