ಅಮರಿಂದರ್ ಸಿಂಗ್ ಹೊಸ ಪಕ್ಷ ಘೋಷಣೆ

ಚಂಡೀಗಢ ಅ 27 : ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ತಮ್ಮದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಬಗ್ಗೆ ಬುಧವಾರ ಘೋಷಣೆ ಮಾಡಿದ್ದಾರೆ.

ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿದ ನಂತರ ಪಕ್ಷದ ಹೆಸರನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅವರು ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ‌ಸುಳಿವನ್ನು ಅವರು ನೀಡಿದ್ದಾರೆ.

ರಾಜ್ಯದ ಸಮಸ್ಯೆಗಳ ಕುರಿತು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವುದಾಗಿ ಅಮರಿಂದರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈಗಾಗಲೇ ಎರಡು ಬಾರಿ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನವಜೋತ್ ಸಿಂಗ್ ಸಿಧು ವಿರುದ್ಧ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಅಮರೀಂದರ್ ಹೇಳಿದ್ದಾರೆ.

“ನವಜೋತ್ ಸಿಂಗ್ ಸಿಧು ಅವರು ಎಲ್ಲಿಂದ ಕಣಕ್ಕಿಳಿದರೂ ನಾವು ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ” ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಚಂಡೀಗಢದಲ್ಲಿ ಹೇಳಿದ್ದಾರೆ.

ಎರಡು ಬಾರಿಯ ಮಾಜಿ ಮುಖ್ಯಮಂತ್ರಿಯಾಗಿರುವ ಅಮರೀಂದರ್, ಭಾರತ-ಪಾಕಿಸ್ತಾನ ಗಡಿಯ 50 ಕಿಮೀ ವರೆಗೆ ಬಿಎಸ್‌ಎಫ್ ನಿಯೋಜನೆಗೆ ಬೆಂಬಲ ನೀಡಿದ್ದಾರೆ. ಇದು ರಾಜ್ಯದ ಭದ್ರತೆಗೆ ಅಗತ್ಯವಿದೆ ಎಂದು ಹೇಳಿದ್ದಾರೆ.

ತಮ್ಮ ಮಾಜಿ ಕಾಂಗ್ರೆಸ್ ಸಹೋದ್ಯೋಗಿಗಳ ವೈಯಕ್ತಿಕ ದಾಳಿಗೆ ಪ್ರತಿಕ್ರಿಯಿಸಿದ ಅಮರೀಂದರ್ ಸಿಂಗ್, “ವೈಯಕ್ತಿಕ ದಾಳಿ ನಡೆಸುತ್ತಿರುವ ಅವರು ಈಗ ಪಟಿಯಾಲಾ ಮತ್ತು ಇತರೆಡೆಗಳಲ್ಲಿ ನನ್ನ ಬೆಂಬಲಿಗರಿಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಇಂತಹ ಕೀಳು ಮಟ್ಟದ ರಾಜಕೀಯ ಆಟಗಳಿಂದ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಅಂತಹ ತಂತ್ರಗಳಿಂದ ಅವರು ಮತಗಳನ್ನು ಅಥವಾ ಜನರ ಹೃದಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ನನ್ನ ಬೆಂಬಲಕ್ಕೆ ನಿಂತವರು ಪಂಜಾಬ್‌ನ ಶಾಂತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸಿದವರಾಗಿದ್ದಾರೆ. ಅವರು ಬೆದರಿಕೆ ಅಥವಾ ಕಿರುಕುಳದ ಇಂತಹ ಸಣ್ಣ ಕೃತ್ಯಗಳಿಗೆ ಹೆದರುವುದಿಲ್ಲ. ನಾವು ಪಂಜಾಬಿನ ಭವಿಷ್ಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇವೆ” ಎಂದಿದ್ದಾರೆ.

Exit mobile version