ಅರ್ಥಪೂರ್ಣ ಮಹಾನವಮಿಯ ಮಹತ್ವವೇನು? ಮಾಹಿತಿ ಇಲ್ಲಿದೆ ನೋಡಿ

ಭೂಲೋಕದಲ್ಲಿ ರಾಕ್ಷಸರ ಅಟ್ಟಹಾಸ ಮೆರೆದಾಗ, ಲೋಕದಲ್ಲಿ ಅಧರ್ಮವು ನೆಲೆನಿಂತ ಸಂದರ್ಭದಲ್ಲಿ ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಣೆಗೆ ಅವತಾರ ಎತ್ತಿ ಬಂದವಳೇ ದುರ್ಗಾ ಮಾತೆ. ಒಂಭತ್ತು ದಿನಗಳ ಕಾಲ ದುರ್ಗೆಯು ವಿವಿಧ ಅವಾತರಗಳನ್ನು ಅವತರಿಸಿ ಒಬ್ಬೊಬ್ಬ ರಾಕ್ಷಸರನ್ನು ಸಂಹಾರ ಮಾಡಿದಳು ಎನ್ನುವುದು ಪುರಾಣಗಳ ಉಲ್ಲೇಖ. ಆದ್ದರಿಂದ ನವರೂಪ ಧರಿಸಿದ ದುರ್ಗೆಯನ್ನು ನವರಾತ್ರಿಯ ವೇಳೆ ಪೂಜಿಸಲಾಗುವುದು. ನವರಾತ್ರಿಯ ಈ ಸಂದರ್ಭದಲ್ಲಿ ಷೋಡಶೋಪಚಾರ ಪೂಜೆಯನ್ನು ನೆರವೇರಿಸಿದರೆ ಆಭಯ ಪ್ರಾಪ್ತಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ನವರಾತ್ರಿಯ ಒಂಭತ್ತು ದಿನಗಳ ಕಾಲ ದುಷ್ಟರನ್ನು ಸಂಹಾರಗೈದು ನ್ಯಾಯನೀತಿ ನೆಲೆ ಮಾಡಿದ ದಿನಗಳು.
ದೇವಿಯು ನವರಾತ್ರಿಯ ಸಂದರ್ಭದಲ್ಲಿ ಮಹಿಷಾಸುರ, ರಕ್ತಬೀಜಾಸುರ ಹೀಗೆ ಹಲವಾರು ರಾಕ್ಷಸರನ್ನು ಕೊಂದು ತನ್ನ ಭಕ್ತರನ್ನು ರಕ್ಷಿಸಿದಳು ಎನ್ನಲಾಗುವುದು. ನವರಾತ್ರಿ ವೇಳೆ ಕೇವಲ ದುರ್ಗೆಯನ್ನು ಮಾತ್ರ ಅಲಂಕಾರ ಮಾಡಿ ಪೂಜಿಸುವುದಲ್ಲದೆ, ಸಂಪೂರ್ಣ ನಗರವನ್ನು ಅಲಂಕರಿಸಿ ಸಂಭ್ರಮ ಹಾಗೂ ಸಡಗರದಿಂದ ನವರಾತ್ರಿ ಆಚರಿಸಲಾಗುವುದು. ಪ್ರತಿಯೊಂದು ದಿನದ ದುರ್ಗೆಯ ಆರಾಧನೆಗೆ ಅದರದ್ದೇ ಆಗಿರುವ ಅರ್ಥವಿದೆ.
ಒಂದನೇ ದಿನದಿಂದ ಮೂರನೇ ದಿನದ ತನಕ ದುರ್ಗೆಯ ವಿವಿಧ ರೂಪ ಹಾಗೂ ಆಕೆಯ ಪೂಜೆ ಮಾಡಲಾಗುವುದು. ದುರ್ಗೆಯ ಶಕ್ತಿಹಾಗೂ ಅಸ್ತಿತ್ವದ ವಿವಿಧ ರೂಪಗಳನ್ನು ಈ ವೇಳೆ ಪೂಜಿಸಲಾಗುವುದು.

9ನೇ ದಿನದ ಮಹತ್ವ:
ನವರಾತ್ರಿಯ 9ನೇ ದಿನವು ತುಂಬಾ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಮಹಾನವಮಿಯೆಂದು ಕರೆಯಲಾಗುವುದು ಮತ್ತು ಕನ್ಯಾ ಪೂಜೆಯು ಈ ದಿನದಲ್ಲಿ ನಡೆಯುವುದು. ಮದುವೆ ಆಗದೆ ಇರುವ ಒಂಭತ್ತು ಮಂದಿ ಹುಡುಗಿಯರನ್ನು ಈ ದಿನ ಪೂಜಿಸಲಾಗುವುದು. 9 ಹುಡುಗಿಯರಲ್ಲಿ ದುರ್ಗೆಯ 9 ಅವತಾರಗಳನ್ನು ಕಾಣಲಾಗುವುದು. ಮನೆಯಲ್ಲಿರುವ ಮಹಿಳೆಯರು ಹುಡುಗಿಯರ ಪಾದ ತೊಳೆದು ಪೂಜೆ ಮಾಡುವರು. ಹುಡುಗಿಯರಿಗೆ ಒಳ್ಳೆಯ ಆಹಾರ ಮತ್ತು ಹೊಸ ಬಟ್ಟೆ ನೀಡಲಾಗುತ್ತದೆ. ಇದು ತಾಯಿ ದುರ್ಗೆಗೆ ಗೌರವ ನೀಡುವ ಪ್ರತೀಕ ನಡೆಸಲಾಗುತ್ತದೆ.

ಆಯುಧ ಪೂಜೆ:
ನವರಾತ್ರಿಯ ಕೊನೆಯ ದಿನ ಆಚರಿಸುವ ಹಬ್ಬವೇ ಆಯುಧ ಪೂಜೆ. ನವಮಿಯ ದಿನ ಬರುವ ಈ ಹಬ್ಬವನ್ನು ಶಸ್ತ್ರ ಪೂಜೆ ಎಂದೂ ಕರೆಯಲಾಗುತ್ತದೆ. ರಾಜ ಮಹರಾಜರ ಕಾಲದಲ್ಲಿ ಸೈನಿಕರು ತಮ್ಮ ಆಯುಧಗಳನ್ನು ಪೂಜೆ ಮಾಡಿ ಅವುಗಳಿಗೆ ಗೌರವ ಅರ್ಪಿಸುತ್ತಿದ್ದರು. ಆ ಪೂಜೆ ಇನ್ನೂ ಮುಂದುವರಿದಿದೆ. ಈಗಿನ ಕಾಲದಲ್ಲಿ ಶಸ್ತ್ರಾಸ್ತ್ರಗಳನ್ನು ಜನರು ಬಳಸದ ಕಾರಣ ವಾಹನ, ಕೆಲಸ ಮಾಡುವ ಯಂತ್ರಗಳು, ಮನೆ ಬಳಕೆಯ ಆಯುಧಗಳನ್ನು ಇಟ್ಟು ಪೂಜೆ ಮಾಡಲಾಗುತ್ತದೆ.

ಹಿನ್ನಲೆ:
ತಾಯಿ ಚಾಮುಂಡೇಶ್ವರಿಯು ಮಹಿಷಾಸುರನನ್ನು ಕೊಂದ ಮಾರನೇಯ ದಿನ ಶಸ್ತ್ರಾಸ್ತ್ರಗಳನ್ನು ಇಟ್ಟು ಪೂಜಿಸಲಾಯಿತು. ಅವುಗಳಿಗೆ ಶಾಂತಿ ಮಾಡಲಾಯಿತು ಎನ್ನುವ ಪುರಾಣದ ಕಥೆಯಿದ್ದು, ಅದೇ ಹಿನ್ನೆಲೆಯಲ್ಲಿ ಈಗಲೂ ಕೂಡ ಶಸ್ತ್ರಾಸ್ತ್ರಗಳ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಆಯುಧ ಪೂಜೆಯ ದಿನ ಅವುಗಳಿಗೆ ಶಾಂತಿ ಮಾಡಲಾಗುತ್ತಿದೆ.
ಮಹಾ ನವರಾತ್ರಿಯ ನವಮಿ ತಿಥಿಯಂದು ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ. ಈ ಹಬ್ಬವು ದಕ್ಷಿಣ ಭಾರತದಲ್ಲಿ ಜನಪ್ರಿಯ ಹಬ್ಬವಾಗಿದೆ. ಅದರಲ್ಲೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿ ಆಯುಧ ಪೂಜೆಯನ್ನುಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇದನ್ನು ಶಸ್ತ್ರ ಪೂಜೆ ಅಥವಾ ಅಸ್ತ್ರ ಪೂಜೆ ಎಂದೂ ಕರೆಯುವುದುಂಟು.

ಆಯುಧ ಪೂಜೆಯಲ್ಲಿ ವಾಸ್ತವವಾಗಿ ಶಸ್ತ್ರಾಸ್ತ್ರಗಳನ್ನು ಪೂಜಿಸಬೇಕು ಕಾಲ ಕಳೆದಂತೆ ಎಲ್ಲ ಬಗೆಯ ಯಂತ್ರಗಳನ್ನೂ ಇಟ್ಟು ಪೂಜೆ ಕಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಕುಶಲ ಕರ್ಮಿಗಳು ತಾವು ಬಳಸುವ ವಸ್ತುಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಭಾರತದ ಇತರೆ ಭಾಗಗಳಲ್ಲಿ ವಿಶ್ವಕರ್ಮ ಪೂಜೆ ಎಂದು ಇದನ್ನು ಆಚರಿಸಲಾಗುತ್ತದೆ. ವಿಶ್ವಕರ್ಮಿಗಳು ಆಯುಧ ಪೂಜೆಯಂದು ತಾವು ಬಳಸುವ ಯಂತ್ರಗಳು, ವಸ್ತುಗಳನ್ನು ಇಟ್ಟು ಪೂಜೆ ಮಾಡಲಾಗುತ್ತದೆ.

ಸಾಮಾನ್ಯ ಜನರು ತಮ್ಮ ಬೈಕ್‌, ಕಾರು, ವಾಣಿಜ್ಯ ವಾಹನ ಮೊದಲಾದವುಗಳನ್ನು ಪೂಜಿಸುತ್ತಾರೆ. ತಮ್ಮ ವಾಹನಗಳನ್ನು ಹಿಂದಿನ ದಿನ ಚೆನ್ನಾಗಿ ತೊಳೆದು ಅಲಂಕಾರ ಮಾಡಿ ಆಯುಧ ಪೂಜೆಯ ದಿನದಂದು ಬೂದುಗುಂಬಳ ಕಾಯಿಯೊಳಗೆ ಕಾಸು, ಕುಂಕುಮ ತುಂಬಿ ತಮ್ಮ ವಾಹನಗಳ ಮುಂದೆ ಒಡೆಯಲಾಗುತ್ತದೆ. ಹೀಗೆ ಕುಂಬಳಕಾಯಿ ಒಡೆಯುವುದರಿಂದ ವಾಹನಕ್ಕೆ ಕೆಟ್ಟ ದೃಷ್ಟಿ ತಾಗುವುದಿಲ್ಲ ಎನ್ನುವ ನಂಬಿಕೆ ಇದೆ.

ದಕ್ಷಿಣ ಭಾರತದಲ್ಲೇ ಕೆಲವೆಡೆ ಬೂದುಗುಂಬಳ ಕಾಯಿ ಒಡೆದರೆ ಮತ್ತೆ ಕೆಲವೆಡೆ ಸಿಹಿಗುಂಬಳವನ್ನು ಒಡೆದು ವಾಹನ, ಯಂತ್ರಗಳಿಗೆ ಶಾಂತಿ ಮಾಡಲಾಗುತ್ತದೆ. ಇನ್ನು ಮನೆಗಳಲ್ಲಿ ಮಾವಿನ ತೋರಣ ಕಟ್ಟಿ, ಹೊಸಿಲಿಗೆ ಅರಿಶಿಣ ಬಳೆದು ಬಾಳೆ ದಿಂಡು ಕಟ್ಟಿ ಪೂಜೆ ಮಾಡಲಾಗುತ್ತದೆ. ಇನ್ನು ಗಂಧದ ಅಕ್ಷತೆಯು ಈ ಹಬ್ಬದಲ್ಲಿ ಮಹತ್ವ ಪಡೆದುಕೊಂಡಿದ್ದು ಮನೆಯಲ್ಲಿ ಪೂಜೆ ಮಾಡಿದ ನಂತರ ಗಂಧವನ್ನು ಹಣೆಗೆ ಇಟ್ಟುಕೊಳ್ಳಲಾಗುತ್ತದೆ.

ದಕ್ಷಿಣ ಭಾರತದ ಪಂಚಾಂಗದಲ್ಲಿ ಆಯುಧ ಪೂಜೆ ಮತ್ತು ಸರಸ್ವತಿ ಪೂಜೆಯನ್ನು ಒಂದೇ ದಿನ ಉಲ್ಲೇಖಿಸಲಾಗಿದೆ. ಧರ್ಮ ಶಾಸ್ತ್ರಗಳ ಪ್ರಕಾರ ನವರಾತ್ರಿಯ ಪೂರ್ವ ಆಶಾಢ ನಕ್ಷತ್ರದಲ್ಲಿ ಈ ಹಬ್ಬವು ಬೀಳುತ್ತದೆ.

Exit mobile version