ಅಸ್ಸಾಂ ಪ್ರವಾಹ : ಕಳೆದ 24 ಗಂಟೆಗಳಲ್ಲಿ 4 ಮಕ್ಕಳು ಸೇರಿದಂತೆ 12 ಸಾವು, 54 ಲಕ್ಷಕ್ಕೂ ಹೆಚ್ಚು ಜನರ ಪರದಾಟ

ಕಳೆದ 24 ಗಂಟೆಗಳಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಇನ್ನೂ 12 ಜನರು ಸಾವನ್ನಪ್ಪಿದ್ದರಿಂದ ಅಸ್ಸಾಂನಲ್ಲಿ(Assam) ಪ್ರವಾಹ(Flood) ಪರಿಸ್ಥಿತಿ ಬುಧವಾರ ಮತ್ತಷ್ಟು ಭೀಕರ ಸ್ಥಿತಿಗೆ ತಲುಪಿದೆ. ಈ ವರ್ಷದ ಪ್ರವಾಹ ಮತ್ತು ಭೂಕುಸಿತದ(Landslide) ಪರಿಣಾಮದಿಂದ ಸಾವಿನ ಸಂಖ್ಯೆ100ರ ಗಡಿ ದಾಟಿ ಏರಿಕೆ ಕಾಣುತ್ತಿದೆ.

ಹೋಜೈ ಜಿಲ್ಲೆಯಲ್ಲಿ ನಾಲ್ಕು ಸಾವುಗಳು ವರದಿಯಾಗಿದ್ದರೆ, ಕಾಮ್ರೂಪ್‌ನಲ್ಲಿ ಪ್ರವಾಹಕ್ಕೆ ತುತ್ತಾಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಬರ್ಪೇಟಾ ಮತ್ತು ನಲ್ಬರಿಯಲ್ಲಿ ತಲಾ ಮೂವರು ಸಾವನ್ನಪ್ಪಿದ್ದಾರೆ. 32 ಜಿಲ್ಲೆಗಳ 4,941 ಗ್ರಾಮಗಳಲ್ಲಿ 54.7 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೆ ಸಿಲುಕಿದ್ದಾರೆ. 2.71 ಲಕ್ಷಕ್ಕೂ ಹೆಚ್ಚು ಜನರು ಆಶ್ರಯ ಪಡೆದಿರುವ ಸಂತ್ರಸ್ತ ಜಿಲ್ಲೆಗಳಲ್ಲಿ ಒಟ್ಟು 845 ಪರಿಹಾರ ಶಿಬಿರಗಳು ಮತ್ತು 1025 ಪರಿಹಾರ ವಿತರಣಾ ಕೇಂದ್ರಗಳನ್ನು ಜಿಲ್ಲಾಡಳಿತಗಳು ಸ್ಥಾಪಿಸಿವೆ. ಚಿರಾಂಗ್ ಜಿಲ್ಲೆಯಲ್ಲಿ ಬುಧವಾರ ಪ್ರವಾಹ ಪರಿಸ್ಥಿತಿ ಹದಗೆಡುತ್ತಿದ್ದಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹೆಚ್ಚಿನ ಕಾರ್ಯಾಚರಣೆಗೆ ಇಳಿದಿದ್ದಾರೆ.

ಬಜಾಲಿ, ಬಕ್ಸಾ, ಬರ್ಪೇಟಾ, ಬಿಸ್ವನಾಥ್, ಬೊಂಗೈಗಾಂವ್, ಕ್ಯಾಚಾರ್, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ್, ದಿಮಾ-ಹಸಾವೊ, ಗೋಲ್‌ಪಾರಾ, ಗೋಲಾಘಾಟ್, ಹೈಲಕಂಡಿ, ಹೋಜೈ, ಕಾಮ್ರೂಪ್, ಕಾಮ್ರೂಪ್ ಮೆಟ್ರೋಪಾಲಿಟನ್, ಕಾರ್ಬಿ ಆಂಗ್ಲಾಂಗ್ ವೆಸ್ಟ್, ಕರೀಮ್‌ಗಂಜ್‌ಲಿಖ್, ಕರೀಮ್‌ಗಂಜ್, ಪಶ್ಚಿಮ, , ಮೋರಿಗಾಂವ್, ನಾಗಾಂವ್, ನಲ್ಬರಿ, ಶಿವಸಾಗರ್, ಸೋನಿತ್ಪುರ್, ದಕ್ಷಿಣ ಸಲ್ಮಾರಾ, ತಮುಲ್ಪುರ್, ತಿನ್ಸುಕಿಯಾ ಮತ್ತು ಉದಲ್ಗುರಿ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಪ್ರಸಕ್ತ ವರ್ಷ ಪ್ರವಾಹದ ಅಲೆಯಲ್ಲಿ 99,026 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಕೊಪಿಲಿ, ದಿಸಾಂಗ್ ಮತ್ತು ಬ್ರಹ್ಮಪುತ್ರ ನದಿಗಳಲ್ಲಿ ನೀರಿನ ಮಟ್ಟ ಹಲವೆಡೆ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಸೇನೆಯಲ್ಲದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಅಸ್ಸಾಂ ಪೊಲೀಸರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ದರ್ರಾಂಗ್, ಬರ್ಪೇಟಾ ಮತ್ತು ಕಮ್ರೂಪ್ ಜಿಲ್ಲೆಗಳಲ್ಲಿ ಸೇನೆಯು ಬುಧವಾರ ತನ್ನ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಎಂದಿನಂತೆ ಮುಂದುವರೆಸಿದೆ.

ಅತಿ ದೂರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ಔಷಧಿಗಳನ್ನು ಒದಗಿಸಲು ಪ್ರವಾಹ ಸಂತ್ರಸ್ತರನ್ನು ತಲುಪಲು ಸೇನೆಯ ಏಳು ಸಂಯುಕ್ತ ಅಂಕಣಗಳು ಹಗಲಿರುಳು ನೋಡದೆ ಶ್ರಮಿಸುತ್ತಿವೆ.

Exit mobile version