ಅಸ್ಸಾಂ ಪ್ರವಾಹ : 1,000 ಹಳ್ಳಿಗಳಿಗೆ ನುಗ್ಗಿದ ಮಳೆ, 8 ಸಾವು, ಐವರು ನಾಪತ್ತೆ!

Assam

ಅಸ್ಸಾಂನಲ್ಲಿ(Assam) ಪ್ರವಾಹ(Flood) ಪರಿಸ್ಥಿತಿ ತೀವ್ರವಾಗಿ ಮುಂದುವರಿದಿದ್ದು, 26 ಜಿಲ್ಲೆಗಳಲ್ಲಿ 1,089 ಕ್ಕೂ ಹೆಚ್ಚು ಹಳ್ಳಿಗಳು ಮಳೆಯ ಆರ್ಭಟಕ್ಕೆ ಮುಳುಗಡೆಯಾಗಿವೆ.

ಪ್ರವಾಹ ಮತ್ತು ಭೂಕುಸಿತದಿಂದ ರಾಜ್ಯದಲ್ಲಿ ಇದುವರೆಗೆ ಕನಿಷ್ಠ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾಚಾರ್‌ನಲ್ಲಿ ಇಬ್ಬರು ಮತ್ತು ಉದಲ್‌ಗುರಿಯಲ್ಲಿ ಒಬ್ಬರು ಪ್ರವಾಹದಿಂದ ಸಾವನ್ನಪ್ಪಿದ್ದರೆ, ದಿಮಾ ಹಸಾವೊದಲ್ಲಿ ನಾಲ್ವರು ಮತ್ತು ಲಖಿಂಪುರದಲ್ಲಿ ಒಬ್ಬರು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ಈ ನಡುವೆ ಕ್ಯಾಚಾರ್‌ನಲ್ಲಿ ನಾಲ್ವರು ಮತ್ತು ನಾಗಾಂವ್ ಜಿಲ್ಲೆಯಲ್ಲಿ ಒಬ್ಬರು ಸೇರಿದಂತೆ ಇತರ ಐವರು ನಾಪತ್ತೆಯಾಗಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ.

ಸೇನೆ, ಅರೆಸೇನಾ ಪಡೆಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ಪೊಲೀಸರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ತಮ್ಮ, ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದ ಕನಿಷ್ಠ 3,427 ಜನರನ್ನು ಈಗಾಗಲೇ ಸ್ಥಳಾಂತರಿಸಿವೆ. ಆಯಾ ಜಿಲ್ಲಾಡಳಿತಗಳು 142 ಪರಿಹಾರ ಶಿಬಿರಗಳು ಮತ್ತು 115 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಒಟ್ಟು 39,558 ಸಂತ್ರಸ್ತ ಗ್ರಾಮಸ್ಥರು ಆಶ್ರಯ ಪಡೆದಿದ್ದಾರೆ. ಪ್ರಸ್ತುತ, ಕೊಪಿಲಿ ನದಿಯು ಕಂಪುರ್ ಮತ್ತು ಧರಮ್ತುಲ್‌ನಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ,

ನಂಗ್ಲಾಮುರಘಾಟ್‌ನಲ್ಲಿ ದಿಸಾಂಗ್ ನದಿ, ಎಪಿ ಘಾಟ್‌ನಲ್ಲಿ ಬರಾಕ್ ನದಿ ಮತ್ತು ಕರೀಮ್‌ಗಂಜ್‌ನಲ್ಲಿ ಕುಶಿಯಾರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗುವಾಹಟಿ ಮೂಲದ ಪ್ರಾದೇಶಿಕ ಹವಾಮಾನ ಕೇಂದ್ರವು ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ವ್ಯಾಪಕವಾಗಿ ಭಾರೀ ಮಳೆಯಾಗುವ ಮುನ್ಸೂಚನೆಯಾಗಲಿದೆ ಎಂದು ವರದಿ ನೀಡಿದೆ. ಈ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕೃತವಾಗಿ ತಿಳಿಸಿದೆ.

Exit mobile version