Belagavi: ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವುದು (Assault on woman investigation) ಅತ್ಯಂತ ಅಮಾನವೀಯ. ಇದರಿಂದ ಇಡೀ
ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇಂತಹ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಘಟನೆಗೆ ಕುರಿತಂತೆ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ “ಪ್ರಕರಣದ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸುವ ಮೂಲಕನೊಂದ
ಕುಟುಂಬಕ್ಕೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮದು” ಎಂದಿದ್ದಾರೆ. ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ಅವರು “ಪ್ರಕರಣದಲ್ಲಿ ಯಾರು ತಪ್ಪಿತಸ್ಥರಿದ್ದಾರೋ, ಅವರ ಮೇಲೆ ಕಠಿಣ ಕ್ರಮ
ಕೈಗೊಳ್ಳುತ್ತೇವೆ” ಎಂದು (Assault on woman investigation) ತಿಳಿಸಿದ್ದಾರೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹಲ್ಲೆಗೊಳಗಾದ ಮಹಿಳೆಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, “ಆರೋಪಿಗಳು ಮಹಿಳೆ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿ ಕಂಬಕ್ಕೆ
ಕಟ್ಟಿ ಹಾಕಿದ್ದರು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಿ ಜಿಲ್ಲಾಸ್ಪತ್ರಗೆ ದಾಖಲಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈಗಾಗಲೇ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು 9 ಜನರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು,
ಅವರನ್ನು ಪೊಲೀಸರು ಬಂಧಿಸಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು “ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಬೆಳಗಾವಿ ಹೊರ ವಲಯದ ವಂಟಮೂರಿ ಗ್ರಾಮದ ನಾಯಕ್ ಸಮುದಾಯಕ್ಕೆ ಸೇರಿದ ದುಂಡಪ್ಪ (24) ಮತ್ತು ಪ್ರಿಯಾಂಕಾ (18)ಪರಸ್ಪರ ಪ್ರೀತಿಸುತಿದ್ದರು. ಭಾನುವಾರ ರಾತ್ರಿ ಇಬ್ಬರು ಮನೆ
ಬಿಟ್ಟು ಓಡಿ ಹೋಗಿದ್ದಾರೆ. ಇದರಿಂದ ಕೋಪಗೊಂಡ ಯುವತಿಯ ಸಂಬಂಧಿಕರು, ಯುವಕನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.
ಯುವಕನ ತಾಯಿ ಮೇಲೆ ಹಲ್ಲೆ ನಡೆಸಿ ಆಕೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ವಿಚಾರ – ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ
- ಭವ್ಯಶ್ರೀ ಆರ್ ಜೆ