ಅತಿ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು; ಬೆಚ್ಚಿಬಿದ್ದ ಕಾಫಿನಾಡು

ಪ್ರವಾಸಿಗರ ಹಾಟ್ ಸ್ಪಾಟ್ ಎಂದೇ ಕರೆಯಿಸಿಕೊಳ್ಳುವ ಕಾಫಿನಾಡಿನ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ. ಒಂದು ಮಗ್ಗುಲಲ್ಲಿ ಪಶ್ಚಿಮ ಘಟ್ಟದ ಸೆರಗನ್ನು ಹೊದ್ದುಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಸೌಂದರ್ಯವನ್ನು ಮೆಚ್ಚದವರೇ ಇಲ್ಲ. ಇಷ್ಟೆಲ್ಲ ಪ್ರಖ್ಯಾತಿ ಹೊಂದಿರುವ ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವುದರಿಂದ ಕುಖ್ಯಾತಿಗೂ ಪಾತ್ರವಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಲೈಂಗಿಕ ದೌರ್ಜನ್ಯಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿವೆ ಎಂಬ ಆತಂಕಕಾರಿ ಅಂಶ ಕಾಫಿನಾಡ ಮಂದಿಯನ್ನು ಬೆಚ್ಚಿಬೀಳಿಸಿವೆ.

ಶೃಂಗೇರಿಯಲ್ಲಿ ಅಪ್ರಾಪ್ತೆಯ ಮೇಲೆ ಸ್ವಂತ ಚಿಕ್ಕಮ್ಮನ ಪ್ರೋತ್ಸಾಹದಿಂದ 30ಕ್ಕೂ ಹೆಚ್ಚು ಮಂದಿ ನಿರಂತರ ಅತ್ಯಾಚಾರ ನಡೆಸಿದ್ದರು. ಚಿಕ್ಕಮಗಳೂರು ತಾಲೂಕಿನಲ್ಲಿ ಮಲ್ಲಂದೂರು ಠಾಣಾ ವ್ಯಾಪ್ತಿಯಲ್ಲಿ 8ನೇ ತರಗತಿ ಬಾಲಕಿಯ ನಗ್ನ ಚಿತ್ರಗಳನ್ನ ಇಟ್ಕೊಂಡು ಹೆದರಿಸಿ ಯುವಕರಿಂದ ಅತ್ಯಾಚಾರ ನಡೆಸಲಾಗಿತ್ತು. ಮೂಡಿಗೆರೆ ತಾಲೂಕಿನಲ್ಲಿ ಸ್ವಂತ ಅಣ್ಣನಿಂದಲೇ ತಂಗಿಯ ಮೇಲೆ ಅತ್ಯಾಚಾರ ನಡೆದು ಅಪ್ರಾಪ್ತ ಬಾಲಕಿ ಏಳೂವರೆ ತಿಂಗಳ ಗರ್ಭಿಣಿಯಾಗಿದ್ದಳು. ಕೊಪ್ಪ ತಾಲೂಕಿನಲ್ಲಿ ಅಪ್ರಾಪ್ತೆಯನ್ನ ಗರ್ಭಿಣಿಯನ್ನಾಗಿಸಿ ಅಸ್ಸಾಂಗೆ ಖತರ್ನಾಕ್ ಕಿಲಾಡಿ ಓಡಿಹೋಗಿದ್ದ. ಹೀಗೆ ಒಂದಾ.. ಎರಡಾ..? ಈ ವರ್ಷ ಕಾಫಿನಾಡಿನಲ್ಲಿ ಅಪ್ರಾಪ್ತೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಸಂಖ್ಯೆ ಕೇಳಿದರೆ ರಾಜ್ಯದ ಜನರು ಬೆಚ್ಚಿ ಬೀಳುವುದಂತೂ ಸತ್ಯ.

ಏಕೆಂದರೆ, ಪೋಕ್ಸೊ ಪ್ರಕರಣಗಳಲ್ಲಿ ಕರ್ನಾಟಕದಲ್ಲೇ ನಂಬರ್ ಒನ್ ಎಂಬ ಕುಖ್ಯಾತಿಗೆ ಕಾಫಿನಾಡು ಚಿಕ್ಕಮಗಳೂರು ಒಳಗಾಗಿದೆ. ಲಾಕ್ ಡೌನ್ ಬಳಿಕ ಚಿಕ್ಕಮಗಳೂರು ಜಿಲ್ಲೆಯಲ್ಲಿ 71 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದರೆ, 15 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ಅಧಿಕಾರದ ಸಮಯಪ್ರಜ್ಞೆಯಿಂದ 80ಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳನ್ನ ತಡೆಹಿಡಿಯಲಾಗಿದೆ. ಬೆಳಕಿಗೆ ಬಂದಿರೋ ಪ್ರಕರಣಗಳು ಇಷ್ಟಾದರೆ, ಮಾನ-ಮರ್ಯಾದೆ, ರಾಜಿ ಅದು ಇದು ಅಂತಾ ಇದಕ್ಕಿಂತ ಹೆಚ್ಚು ಪ್ರಕರಣಗಳು ಮುಚ್ಚಿ ಹೋಗಿವೆ ಅನ್ನೋದು ಆತಂಕಕಾರಿ ಅಂಶ.

ಕೊರೊನಾಕ್ಕಿಂತ ಮುಂಚೆ ಶಾಲೆಗೆ ಹೋಗಿ ಬರೋದು, ಹೋಂ ವರ್ಕ್ ಹೀಗೆ ಒಂದಿಲ್ಲೊಂದು ಕೆಲಸಗಳಲ್ಲಿ ಬ್ಯುಸಿ ಇದ್ದ ವಿದ್ಯಾರ್ಥಿನಿಯರು ಲಾಕ್ ಡೌನ್ ನಿಂದ ಮನೆಯಲ್ಲೇ ಉಳಿಯುವಂತಾಯ್ತು. ಇದು ಕೆಲ ನೀಚರಿಗೆ ವರವಾಗಿ ಪರಿಣಮಿಸಿದ್ದಲ್ಲದೆ ಪುಟ್ಟ ಪುಟ್ಟ ಮಕ್ಕಳ ಭವಿಷ್ಯವನ್ನೂ ಯೋಚಿಸದೇ ಬಾಲಕಿಯರನ್ನ ವಂಚಿಸಿ, ಬಲತ್ಕಾರ ಮಾಡಿ, ಮೋಸ ಮಾಡಿ ಅತ್ಯಾಚಾರದಂತಹ ಹೀನಕೃತ್ಯಕ್ಕೆ ತಳ್ಳುವಂತಾಯ್ತು.

ಈ ಮಧ್ಯೆ ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವ ರೀತಿಯಲ್ಲಿ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಇಲ್ಲಿವರೆಗೂ 18 ಆರೋಪಿಗಳನ್ನ ಬಂಧಿಸಲಾಗಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರು ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆಗೆ ಸಮ್ಮತ್ತಿಸಿದ್ರೂ, ಪ್ರಕರಣ ಬೆಳಕಿಗೆ ಬಂದ ನಂತರ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇನ್ನೂ ಆನ್ ಲೈನ್ ಶಿಕ್ಷಣದ ವೇಳೆ ಮೊಬೈಲ್ನಲ್ಲಿ ಅಶ್ಲೀಲ ದೃಶ್ಯಗಳನ್ನ ನೋಡಿ ಬಾಲಕ-ಬಾಲಕಿಯರು ಪ್ರಚೋದನೆಗೊಳಗಾಗಿ ಅಡ್ಡದಾರಿ ಹಿಡಿಯಲು ಮೊಬೈಲ್ ಕೂಡ ಕಾರಣವಾಗಿದೆ ಅಂತಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ದಾರೆ.

ಶೃಂಗೇರಿಯಲ್ಲಿ ನಡೆದ ನೀಚಕೃತ್ಯ ಕೇಳಿ ಇಡೀ ರಾಜ್ಯದ ಮಂದಿ ಬೆಚ್ಚಿ ಬಿದ್ದಿದ್ದರು. ಬರೋಬ್ಬರಿ 30ಕ್ಕೂ ಹೆಚ್ಚು ಜನರು ಅಪ್ರಾಪ್ತೆಯ ವಿಡಿಯೋ ಒಂದನ್ನ ಇಟ್ಕೊಂಡು ನಿರಂತರ ಅತ್ಯಾಚಾರ ನಡೆಸುತ್ತಿದ್ದರು ಅನ್ನೋ ವಿಚಾರ ಕಾಮುಕರನ್ನ ಸಮಾಜದ ಮುಂದೆ ಬೆತ್ತಲಾಗುವಂತೆ ಮಾಡಿತು. ಈ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರನ್ನ ಎತ್ತಂಗಡಿ ಮಾಡಲಾಯಿತು. ಇದೆಲ್ಲದರ ಮಧ್ಯೆ ಪೋಕ್ಸೋ ಪ್ರಕರಣಗಳು ಕಾಫಿನಾಡಿನಲ್ಲಿ ಹೆಚ್ಚಾಗ್ತಿರೋದು ಕೂಡ ಆತಂಕದ ಛಾಯೆಯನ್ನ ಮೂಡಿಸಿದ್ದರೆ, ಇನ್ನೊಂದೆಡೆ ಪೋಷಕರು ಮಕ್ಕಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಬೇಕಾದ ಅನಿವಾರ್ಯತೆಯನ್ನ ಕೂಡ ಸೃಷ್ಟಿಸಿದೆ.

Exit mobile version