ಕರ್ನಾಟಕ-ಕೇರಳ ನಡುವಿನ ಸಂಬಂಧ ಕಲಕುವ ಪ್ರಯತ್ನ ಖೇದಕರ: ಸಿದ್ದರಾಮಯ್ಯ

ಬೆಂಗಳೂರು,ಜೂ.29: ಕೆಲ‌ವು ಗುಂಪುಗಳು ಕರ್ನಾಟಕ ಹಾಗೂ ಕೇರಳ ನಡುವಿನ  ಸಂಬಂಧವನ್ನು ಕಲಕಲು ಪ್ರಯತ್ನಿಸುತ್ತಿರುವುದು ಖೇದಕರ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಕೆಲವು ಊರುಗಳ ಹೆಸರನ್ನು ಮಲಯಾಳಂಗೆ ಬದಲಿಸಲಾಗಿದೆ ಎಂಬ ಕುರಿತು ಉಂಟಾಗಿರುವ ಗೊಂದಲಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂಗೆ ಪತ್ರಬರೆದಿರುವ ಅವರು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಭೌಗೋಳಿಕವಾದ ಗಡಿರೇಖೆ ಇದ್ದರೂ ಎರಡೂ ರಾಜ್ಯಗಳ ನಡುವೆ ಸಾಂಸ್ಕೃತಿಕವಾದ ಅವಿನಾಭಾವ ಸಂಬಂಧ ಇದೆ. ಗಡಿ ಪ್ರದೇಶದಲ್ಲಿ ಕನ್ನಡಿಗರು ಮತ್ತು ಕೇರಳಿಗರು ಸೋದರ-ಸೋದರಿಯರಂತೆ ಸಹಬಾಳ್ವೆ ನಡೆಸುತ್ತಿದ್ದಾರೆ.

ಆದರೆ ಕಾಸರಗೋಡಿನ ಸ್ಥಳೀಯ ಸಂಸ್ಥೆಗಳು ಅಲ್ಲಿನ ಕೆಲವು ಹಳ್ಳಿಗಳ ಹೆಸರುಗಳನ್ನು ಕನ್ನಡ ಮತ್ತು ತುಳು ಭಾಷೆಯಿಂದ ಮಲೆಯಾಳಿ ಭಾಷೆಗೆ ಬದಲಾಯಿಸುವ ನಿರ್ಣಯ ಕೈಗೊಂಡಿರುವುದು ವಿಷಾದನೀಯ ಬೆಳವಣಿಗೆ.

ಸಾಮಾನ್ಯವಾಗಿ ಗ್ರಾಮಗಳ ಹೆಸರಿನ ಜೊತೆ ಅಲ್ಲಿನ ಸ್ಥಳೀಯರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೆಸರಿನ ಬದಲಾವಣೆಯಿಂದ ತಾಯ್ನಾಡಿನ ಜೊತೆಗಿನ ಅವರ ಕರುಳಬಳ್ಳಿಯ ಸಂಬಂಧವನ್ನು ಕಿತ್ತುಕೊಂಡ ಹಾಗಾಗುತ್ತದೆ. ಹೀಗಿದ್ದರೂ ಕೆಲ ಗುಂಪುಗಳು ಈ ಸಂಬಂಧವನ್ನು ಕಲಕಲು ಪ್ರಯತ್ನಿಸುತ್ತಿರುವುದು ಖೇದಕರ ಸಂಗತಿ.

ಮಂಜೇಶ್ವರದ ಕನ್ನಡಪ್ರೇಮಿ ಶಾಸಕ ಎ.ಕೆ.ಎಂ.ಆಶ್ರಫ್ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿ ಹೆಸರು ಬದಲಾವಣೆಯ ಪ್ರಸ್ತಾಪ ಇಲ್ಲವೆಂದು ತಿಳಿಸಿರುವುದು ಸ್ವಾಗತಾರ್ಹ ಎಂದಿರುವ ಅವರು, ಕೇರಳದ ಸನ್ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಿ ಉಭಯ ರಾಜ್ಯಗಳ ನಡುವಿನ ಸಂಬಂಧವನ್ನು ಹಾಳುಗೆಡಹುವ ಪ್ರಯತ್ನವನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕೆಂದು ನಾನು ಒತ್ತಾಯಿಸಿದ್ದಾರೆ.

Exit mobile version