ಬಂದ್ ಆಗಿದ್ದು ನಾಲ್ಕು ದಿನ: ನಷ್ಟವಾಗಿದ್ದು ಕೋಟ್ಯಂತರ ರೂ. ಆದಾಯ

ಬೆಂಗಳೂರು, ಡಿ. 15: ವಿವಿಧ ಬೇಡಿಕೆ ಈಡೇರಿಕೆಗೆ ನಾಲ್ಕು ದಿನ ನಡೆದ ಸಾರಿಗೆ ನೌಕರರ ಮುಷ್ಕರದಿಂದ ಸಾರಿಗೆ ಇಲಾಖೆಗೆ ಕೋಟ್ಯಂತರ ರೂ. ನಷ್ಟವಾಗಿದೆ.

ತಮ್ಮನ್ನು ಸರ್ಕಾರಿ ನೌಕರರನ್ನಾಗಿ ನೇಮಕ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ಇನ್ನೂ ಕೆಲವು ಬೇಡಿಕೆಗಳ ಈಡೇರಿಕೆಗಾಗಿ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಈಶಾನ್ಯ ರಸ್ತೆ ಸಾರಿಗೆ, ವಾಯುವ್ಯ ರಸ್ತೆ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. 4 ದಿನ ಸಾರಿಗೆ ಸೇವೆ ಸ್ಥಗಿತಗೊಂಡಿದ್ದರಿಂದ ಸರ್ಕಾರಕ್ಕೆ ಅಂದಾಜು 50 ರಿಂದ 60 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ. ಈ ನಾಲ್ಕು ದಿನಗಳಲ್ಲಿ ನಾಲ್ಕೂ ನಿಗಮದಿಂದ ಬಸ್​ಗಳು ಸಂಚಾರ ನಡೆಸಿರಲಿಲ್ಲ.

ಸೋಮವಾರ ಸಾರಿಗೆ ಇಲಾಖೆ ಸಿಬ್ಬಂದಿ ತಮ್ಮ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದು, ಸರ್ಕಾರಿ ಬಸ್‌ಗಳು ರಸ್ತೆಗಿಳಿದಿವೆ. ಇನ್ನು ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆಯಲ್ಲಿ ಒಟ್ಟು 1.40 ಲಕ್ಷ ಸಾರಿಗೆ ಸಿಬ್ಬಂದಿಗಳಿದ್ದಾರೆ. ನಾಲ್ಕು ನಿಗಮದಿಂದ 36 ಸಾವಿರಕ್ಕೂ ಹೆಚ್ಚು ಸಾರಿಗೆ ಬಸ್​ಗಳಿವೆ.

Exit mobile version