ಶಿಕ್ಷಣ ವ್ಯವಸ್ಥೆಯ ಬದಲಾವಣೆಗೆ ಆಗ್ರಹಿಸಿ ವಿದ್ಯಾರ್ಥಿ ಆತ್ಮಹತ್ಯೆ

ಹಾಸನ ಅ 26 : ಶಿಕ್ಷಣ ವ್ಯವಸ್ಥೆಯಲ್ಲಿ ಪೂರಕವಾದ ಬದಲಾವಣೆ ಆಗಬೇಕು ಎನ್ನುವ ಉದ್ದೇಶದಿಂದ ವಿದ್ಯಾರ್ಥಿಯೋರ್ವ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ನಗರದ ಖಾಸಗಿ ತಾಂತ್ರಿಕ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ನಡೆಸುತ್ತಿದ್ದ ವಿದ್ಯಾರ್ಥಿ ಹೇಮಂತ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತನು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಿರಿಯಾಳು ಗ್ರಾಮದ ಶಿಕ್ಷಕರೋರ್ವರ ಪುತ್ರ ಎಂದು ತಿಳಿದುಬಂದಿದೆ. 

ತನ್ನ ಆತ್ಮಹತ್ಯೆಗೆ ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂಬುದನ್ನು ವೀಡಿಯೋ ಮುಖಾಂತರ ತಿಳಿಸಿರುವ ವಿದ್ಯಾರ್ಥಿಯು ಹದಿಮೂರು ನಿಮಿಷ ಗಳಿರುವ ವಿಡಿಯೋ ಒಂದನ್ನು ಮಾಡಿದ್ದಾನೆ ಮತ್ತು ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಆ ವೀಡಿಯೋ ಪ್ರಸಾರ ಮಾಡಬೇಕೆಂದು ಕೋರಿದ್ದಾನೆ. 

ಈಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೂ ಕೂಡ ಸಮರ್ಪಕವಾಗಿ ಸ್ವಾವಲಂಬಿಗಳಾಗಿ ಕೆಲಸ ಮಾಡಲು ಆಗುತ್ತಿಲ್ಲ, ಶಿಕ್ಷಣ ವ್ಯವಸ್ಥೆ ಬದಲಾದರೆ ಎಲ್ಲವೂ ಸರಿಯಾಗುತ್ತದೆ, ನನ್ನದು ಆತ್ಮಹತ್ಯೆಯಲ್ಲ ಇತರರ ಬಾಳಿಗೆ ಬೆಳಕಾಗಬೇಕೆಂಬ ಉದ್ದೇಶದಿಂದ ಬಲಿದಾನ ಮಾಡಿಕೊಳ್ಳುತ್ತಿರುವುದು ಎಂಬುದಾಗಿ ಯುವಕನು ವೀಡಿಯೋದಲ್ಲಿ ತಿಳಿಸಿದ್ದಾನೆ.

ಆತನ ಸಾವಿನ ನಂತರ ದೇಹದ ಅಂಗಗಳನ್ನು ಅವಶ್ಯಕತೆ ಇರುವವರಿಗೆ ದಾನ ಮಾಡಬೇಕು ಹಾಗೂ ಅಂತ್ಯಕ್ರಿಯೆಗೆ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಪಾಲ್ಗೊಳ್ಳಬೇಕು ಆ ಮೂಲಕ ಉಳಿದ ವಿದ್ಯಾರ್ಥಿಗಳ ಜೀವನಕ್ಕೆ ಪೂರಕವಾಗುವಂತ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಯುವಕನು ತಿಳಿಸಿದ್ದಾನೆ.ಜೊತೆಗೆ ದತ್ತು ಮಕ್ಕಳನ್ನು ಪಡೆದು ಅವರನ್ನು ಸಾಕಿ ಆ ಮಕ್ಕಳಲ್ಲಿ ತನ್ನನ್ನು ಕಾಣುವಂತೆ ಪೋಷಕರಿಗೆ ವೀಡಿಯೋದಲ್ಲಿ ತಿಳಿಸಿದ್ದಾನೆ.

Exit mobile version