ಬೆಡ್ ಬ್ಲಾಕ್ ಹಗರಣ: ಈ ಪ್ರಕರಣದಲ್ಲಾದರೂ ಸ್ವಯಂ ಘೋಷಿತ ‘ರಾಜಾಹುಲಿ’ ಯಂತೆ ನಡೆದುಕೊಳ್ಳಿ, ‘ರಾಜಾ ಇಲಿ’ ಆಗಬೇಡಿ: ಸಿದ್ದರಾಮಯ್ಯ

ಬೆಂಗಳೂರು, ಮೇ. 07: ಬೊಮ್ಮನಹಳ್ಳಿ ವಾರ್ ರೂಂನಲ್ಲಿ ಶಾಸಕ ಸತೀಶ್ ರೆಡ್ಡಿ ಹಾಗೂ ಬೆಂಬಲಿಗರು ನಡೆಸಿರುವ ದೂಂಡಾವರ್ತನೆಯನ್ನು ಹಾಗೂ ಬೆಡ್ ಬ್ಲಾಕ್ ಹಗರಣವನ್ನು ಖಂಡಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ಪ್ರಕರಣದಲ್ಲಿ ಕ್ರಮಕೈಗೊಳ್ಳುವ ಮೂಲಕ ಸ್ವಯ ಪ್ರೇರಿತ ‘ರಾಜಾಹುಲಿ’ಯಂತೆ ನಡೆದುಕೊಳ್ಳಿ, ‘ರಾಜಾ ಇಲಿ’ ಆಗಬೇಡಿ ಎಂದು ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಏನಿದು ಮುಖ್ಯಮಂತ್ರಿ ಅವರೇ? ರಾಜ್ಯದಲ್ಲಿರುವುದು ಚುನಾಯಿತ ಸರ್ಕಾರವೇ? ಇಲ್ಲವೇ ನಿಮ್ಮ ಶಾಸಕರು,‌ ಸಂಸದರು ಮತ್ತು ಅವರ ಬೆಂಬಲಿಗರ ಗೂಂಡಾ ರಾಜ್ಯವೇ? ಬೊಮ್ಮನಹಳ್ಳಿ ವಾರ್ ರೂಮ್‌ನಲ್ಲಿ ದುಂಡಾವರ್ತನೆ ನಡೆಸಿದ್ದ ಶಾಸಕರು, ಬೆಂಬಲಿಗರನ್ನು ತಕ್ಷಣ ಬಂಧಿಸಿ. ಕೊರೊನಾ ವಾರಿಯರ್ಸ್ ಮೇಲಿನ ದೌರ್ಜನ್ಯಕ್ಕೆ ಆರು ತಿಂಗಳಿಂದ ಏಳು ವರ್ಷ ಜೈಲು, ಒಂದು‌ ಲಕ್ಷ ರೂ.ಗಳಿಂದ ಏಳು ಲಕ್ಷ ರೂ ವರೆಗೆ ದಂಡ ವಿಧಿಸಬಹುದು. ಇದೇ ಕಾಯ್ದೆಯಡಿ ಶಾಸಕ ಸತೀಶ್ ರೆಡ್ಡಿ, ಬೆಂಬಲಿಗರನ್ನು ತಕ್ಷಣ ಬಂಧಿಸಿ.

ಇದೇ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಬೆಡ್ ಬ್ಲಾಕ್ ಹಗರಣದ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಸಂಸದರು, ಶಾಸಕರ ಬೆಡ್ ಬ್ಲಾಕ್ ದಂದೆ ಕಾರ್ಯಚರಣೆಯ ಉದ್ದೇಶ ಬಿಬಿಎಂಪಿ ಭ್ರಷ್ಟಚಾರ ಬಯಲುಗೊಳಿಸುವುದಲ್ಲ. ಅದರ ದುರುದ್ದೇಶ ತಮ್ಮ ಸ್ವಜನಪಕ್ಷಪಾತ ಮತ್ತು ಗೂಂಡಾಗಿರಿಯನ್ನು ಮುಚ್ಚಿಹಾಕುವುದು ಎನ್ನುವುದು ಜಗಜ್ಜಾಹೀರಾಗಿದೆ. ಮೊದಲು ಇವರನ್ನು ಬಂಧಿಸಿ.

ಬಿಜೆಪಿ ಶಾಸಕರು,‌ಸಂಸದರು ಮತ್ತು ಬೆಂಬಲಿಗರ ದೌರ್ಜನ್ಯ ಮತ್ತು ಬೆದರಿಕೆ ಬಿಬಿಎಂಪಿ ದಕ್ಷಿಣ ವಲಯದ ವಾರ್ ರೂಮ್‌ಗೆ ಸೀಮಿತವಾದುದಲ್ಲ, ಇದು ನಗರದಾದ್ಯಂತ ನಡೆದಿದೆ. ನಗರದಲ್ಲಿ‌ ಕೊರೊನಾ ಉಲ್ಭಣಿಸಲು ಇವರ ಈ ದುಂಡಾವರ್ತನೆ ಕೂಡಾ ಕಾರಣ. ಈ ಬಗ್ಗೆ ಸಮಗ್ರ ಸ್ವರೂಪದ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ನಡೆಸಿದ ಬೆಡ್ ಬ್ಲಾಕ್ ಹಗರದ ಕಾರ್ಯಾಚರಣೆ ಬಗ್ಗೆ ಮಾತನಾಡಿದ ಅವರು, ಕೋಮು ಘರ್ಷಣೆಗೆ ಪ್ರಚೋದನೆ ಕೂಡಾ ತೇಜಸ್ವಿ ಸೂರ್ಯ ಮತ್ತು‌ ಸಂಗಡಿಗರ ಕಾರ್ಯಾಚರಣೆಯ ದುರುದ್ದೇಶ ಎನ್ನುವುದು ಬಯಲಾಗಿದೆ. IPC153A ಅನ್ವಯ ಈ ದುಷ್ಟಕೂಟದ ವಿರುದ್ಧ ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ಮುಕ್ತ ಹಸ್ತ ನೀಡಬೇಕು ಎಂದು ಒತ್ತಾಯಿಸಿದ ಅವರು, ಬೆಡ್ ಬ್ಲಾಕ್ ದಂದೆ ವಿರುದ್ದದ‌ ತೇಜಸ್ವಿ ಸೂರ್ಯ ಮತ್ತು ಶಾಸಕರ ನಕಲಿ ಕಾರ್ಯಾಚರಣೆ ಪರೋಕ್ಷವಾಗಿ‌ ನಿಮ್ಮ ವಿರುದ್ಧದ ಕಾರ್ಯಚಾರಣೆಯೂ ಹೌದು. ಯಡಿಯೂರಪ್ಪ ಅವರೇ, ಈ ಒಂದು ಪ್ರಕರಣದಲ್ಲಿಯಾದರೂ ಸ್ವಘೋಷಿತ ‘ರಾಜಾಹುಲಿ’ಯಂತೆ ನಡೆದುಕೊಳ್ಳಿ, ‘ರಾಜಾ ಇಲಿ’ ಆಗಬೇಡಿ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

Exit mobile version