ಸೇನಾ ಗೌರವಗಳೊಂದಿಗೆ ಸಿಡಿಎಸ್‌ ಬಿಪಿನ್‌ ರಾವತ್ ಅಂತ್ಯ ಸಂಸ್ಕಾರ

ನವದೆಹಲಿ ಡಿ 10:  ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದ್ದ ಸಿಡಿಎಸ್ ಜನರಲ್‌ ಬಿಪಿನ್ ರಾವತ್‌ ಅವರ ಅಂತ್ಯ ಸಂಸ್ಕಾರ  ದೆಹಲಿಯ ಕಂಟೋನ್ಸೆಂಟ್ ನಲ್ಲಿರುವ ಬ್ರಾರ್ ಸ್ಟೋರ್ ರುದ್ರ ಭೂಮಿಯಲ್ಲಿ ಸಕಲ ಸೇನಾ ಗೌರವಗಳೊಂದಿಗೆ ನಡೆಸಲಾಯಿತು. ಅವರ ಪತ್ನಿ ಮಧುಲಿಕಾ ರಾವತ್ ಅವರ ಅಂತ್ಯಕ್ರಿಯೆ ಕೂಡ ನಡೆಯಿತು. ಒಂದೇ ಚಿತೆಯಲ್ಲಿ ದಂಪತಿಗಳನ್ನು ಮಲಗಿಸಿ ಅಗ್ನಿ ಸ್ಪರ್ಶ ಮಾಡಲಾಯಿತು.

ಇಂದು ಮಧ್ಯಾಹ್ನ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರಗಳನ್ನು ಅವರ ಮನೆಯಲ್ಲಿ ಅಂತಿಮ ದರ್ಶನಕ್ಕಾಗಿ ಇರಲಿಸಲಾಗಿತ್ತು. ರಾವತ್ ನಿವಾಸದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್, ಕಾಂಗ್ರೆಸ್​ ನಾಯಕರಾದ ರಾಹುಲ್​​ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​​, ಹರ್ಯಾಣ ಸಿಎಂ ಮನೋಹರ್​ ಲಾಲ್​ ಕಟ್ಟಾರ್, ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಾದ ಎನ್​.ವಿ. ರಮಣ ಸೇರಿದಂತೆ ಗಣ್ಯಾತಿಗಣ್ಯರು ನಮನ ಸಲ್ಲಿಸಿದರು.

ಬಳಿಕ ರಾವತ್ ಅವರ ನಿವಾಸದಿಂದ ದೆಹಲಿರ ಬ್ರಾರ್ ಸ್ಕ್ವೇರ್ ನಲ್ಲಿರುವ ಚಿತಾಗಾರದವರೆಗೆ ಮೆರವಣಿಗೆ ಮೂಲಕ ಪಾರ್ಥವ ಶರೀರಗಳನ್ನು ತೆಗೆದುಕೊಂಡು ಹೋಗಲಾಯಿತು. ಸುಮಾರು 9 ಕಿ.ಮೀ. ದೂರದ ಅಂತಿಮ ಯಾತ್ರೆ ನಡೆಯಿತು. ಅಂತಿಮ ಯಾತ್ರೆ ನಡೆದ ಮಾರ್ಗದುದ್ದಕ್ಕೂ ಸಾವಿರಾರು ಜನರು ನಿಂತು ರಾವತ್ ಗೆ ಅಂತಿಮ ನಮನ ಸಲ್ಲಿಸಿದರು. ಹಲವರು ಯಾತ್ರೆಯುದ್ದಕ್ಕೂ ಅವರ ಪಾರ್ಥಿವ ಶರೀರ ಇದ್ದ ವಾಹನದ ಪಕ್ಕದಲ್ಲೇ ಓಡುತ್ತಾ ಅಗಲಿದ ಯೋಧನಿಗೆ ನಮನ ಸಲ್ಲಿಸಿದರು. ಅವರ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

Exit mobile version