ಬಿಟ್‌ ಕಾಯಿನ್ ಬಗ್ಗೆ ಸಿದ್ದರಾಮಯ್ಯ ಬಳಿ ದಾಖಲೆ ಇದ್ದರೆ ಕೊಡಲಿ

  ಬೆಂಗಳೂರು ನ 11  : ಬಿಟ್ ಕಾಯಿನ್ ದಂಧೆ ಬಗ್ಗೆ ಸಿದ್ದರಾಮಯ್ಯವರಿಗೆ ಮಾಹಿತಿ ಇದೆಯೇ? ದಾಖಲೆ ಇದ್ದರೆ, ಅವ್ಯವಹಾರ ಆಗಿದ್ದರೆ ಯಾರಿದ್ದಾರೆಂಬ ಹೆಸರು ಕೊಡಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಅಶ್ವತ್ಥನಾರಾಯಣ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಬಿ ಸಿಟಿ ಗಲಾಟೆಯಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್‍ರವರ ಮಗ ಮಹಮ್ಮದ್ ನಲಪಾಡ್ ಹೆಸರಿತ್ತು. ಇವರ ಜೊತೆ ಬಿಟ್ ಕಾಯಿನ್ ಆರೋಪಿ ಶ್ರೀಕೃಷ್ಣ ಹೆಸರೂ ಇತ್ತು. ಆಗಲೇ ಬಿಟ್ ಕಾಯಿನ್ ವಿಚಾರ ಚರ್ಚೆಗೆ ಬಂದಿತ್ತು. ಈಗ ಶ್ರೀಕೃಷ್ಣನು ಕಾಂಗ್ರೆಸ್ ಶಾಸಕರು, ಶಾಸಕರ ಮಕ್ಕಳ ಹೆಸರು ಹೇಳಿದ್ದಾನೆ. ಮಾಜಿ ಸಚಿವರ ಮಗ ರುದ್ರಪ್ಪ ಲಮಾಣಿ ಹೆಸರು ಹೇಳಿದ್ದಾನೆ. ಇದಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಸಮಾಜಘಾತುಕ ಚಟುವಟಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ಸೆಕೆಂಡ್ ಲೈನ್ ಲೀಡರ್‍ಶಿಪ್ ಇದೆ. ಸ್ಕಿಲ್ ಗೇಮ್, ಕ್ಯಾಸಿನೋ ದಂಧೆ, ಲೈವ್ ಬ್ಯಾಂಡ್, ಬಾರ್ ಗಲಭೆಗಳು ಮತ್ತಿತರ ದಂಧೆಕೋರರು ಕಾಂಗ್ರೆಸ್‍ನಲ್ಲಿದ್ದಾರೆ. ಅಂಥ ದಂಧೆಗಳಲ್ಲಿ ಬಿಜೆಪಿಯವರು ಇಲ್ಲ. ಬಿಜೆಪಿ ವಿರುದ್ಧ ದಾಖಲೆ ಇಲ್ಲದೆ ಆರೋಪಿಸುವುದು ಸಲ್ಲದು; ಇದೇ ಪ್ರವೃತ್ತಿ ಮುಂದುವರಿಸಿದರೆ ಸಿದ್ದರಾಮಯ್ಯರ ವಿರುದ್ಧ ಪೊಲೀಸ್ ಕಂಪ್ಲೈಂಟ್ ಕೊಡಲಾಗುವುದು ಎಂದು ಎಚ್ಚರಿಸಿದರು.

ಉತ್ತಮವಾಗಿ ಸರಕಾರ ನಡೆಸುತ್ತಿದ್ದೇವೆ. ಆದರೆ, ಸುಳ್ಳು ಆಪಾದನೆ ಮಾಡುವುದು ಸಿದ್ದರಾಮಯ್ಯ ಅವರ ಚಾಳಿ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರದ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಎಲ್‍ಇಡಿ ಪರದೆಯಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಇದನನ್ನು ಸಹಿಸದ ಸಿದ್ದರಾಮಯ್ಯರವರು ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಕೋಟ್ಯಂತರ ಅವ್ಯವಹಾರ ಮಾಡಿದೆ ಎಂದು ಆರೋಪಿಸಿದ್ದರು. ಆದರೆ, ಅದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡಲಿಲ್ಲ. ಅದಕ್ಕೆ ದಾಖಲೆ ಸಮೇತ ಐದು ಸಚಿವರು ಉತ್ತರವನ್ನೂ ನೀಡಿದ್ದರು; ಆದರೆ, ಸಿದ್ದರಾಮಯ್ಯ ಮತ್ತೆ ಮಾತನಾಡಲಿಲ್ಲ ಎಂದು ವಿವರಿಸಿದರು.

ಸಿದ್ದರಾಮಯ್ಯರವರು ಪ್ರಧಾನಿಯವರಾದ ನರೇಂದ್ರ ಮೋದಿ, ಮುಖ್ಯಮಂತ್ರಿಗಳ ವಿರುದ್ಧ ಸ್ಟೈಲ್ ಆಗಿ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 100 ದಿನಗಳಾದ ಸಂದರ್ಭದಲ್ಲಿ ಏಕವಚನದಲ್ಲಿ ಟೀಕೆ ಮಾಡಿದ್ದರು ಎಂದು ಆಕ್ಷೇಪಿಸಿದರು. ಬಿಟ್ ಕಾಯಿನ್ ಅಂದರೆ ಮೊಬೈಲ್, ಲ್ಯಾಪ್‍ಟಾಪ್‍ಗಳಲ್ಲಿ ನಡೆಯುವ ಡಿಜಿಟಲ್ ಫೇಕ್ ಟರ್ನ್ ಓವರ್; ಇದರ ಸಂಪೂರ್ಣ ಮಾಹಿತಿ ನಮಗಾಗಲೀ ಸರ್ಕಾರಕ್ಕಾಗಲೀ ಇಲ್ಲ ಎಂದು ತಿಳಿಸಿದರು.

Exit mobile version