ನಟ ಜಗ್ಗೇಶ್‍ಗೆ ರಾಜ್ಯಸಭಾ ಟಿಕೆಟ್ ; ಬಿಜೆಪಿ ವರಿಷ್ಠರ ಹೊಸ ತಂತ್ರ!

bjp

ರಾಜ್ಯ ವಿಧಾನಸಭೆಯಿಂದ(Vidhanasabha) ರಾಜ್ಯಸಭೆಗೆ ಚುನಾವಣೆ(Rajyasabha Election) ನಡೆಯಲಿದ್ದು, ಅನಿರೀಕ್ಷಿತ ಎಂಬಂತೆ ನವರಸ ನಟ ಜಗ್ಗೇಶ್(Actor Jaggesh) ಅವರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್ ನೀಡಲಾಗಿದೆ.

ಕಳೆದ ಕೆಲ ದಿನಗಳಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ನಟ ಜಗ್ಗೇಶ್ ಅವರಿಗೆ ದಿಢೀರನೇ ರಾಜ್ಯಸಭಾ ಟಿಕೆಟ್ ನೀಡಿರುವ ದೆಹಲಿ ವರಿಷ್ಠರ ನಡೆಗೆ ರಾಜ್ಯ ಬಿಜೆಪಿ ನಾಯಕರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಜಗ್ಗೇಶ್ ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ನೀಡಬೇಕೆಂದು ರಾಜ್ಯ ಬಿಜೆಪಿ ನಾಯಕರು ದೆಹಲಿ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಉತ್ತಮ ವಾಕ್‍ಚಾತುರ್ಯ ಹೊಂದಿರುವ ನಟ ಜಗ್ಗೇಶ್ ರಾಜಕೀಯದಲ್ಲಿ ಸಕ್ರಿಯರಾದಷ್ಟು ಬಿಜೆಪಿಗೆ ನೆರವಾಗಲಿದೆ.

ಕರ್ನಾಟಕದ ಸಾಮಾನ್ಯ ಜನರೊಂದಿಗೆ ಕಿರುತೆರೆ ಮೂಲಕ ಉತ್ತಮ ಸಂಪರ್ಕವನ್ನು ಜಗ್ಗೇಶ್ ಸಾಧಿಸಿದ್ದಾರೆ. ರಾಜಕೀಯವಾಗಿ ಅವರು ಬಿಜೆಪಿಯೊಂದಿಗಿದ್ದರು, ಸಾಮಾನ್ಯ ಮತದಾರರನ್ನು ಸುಲಭವಾಗಿ ತಮ್ಮ ಮಾತಿನ ಮೂಲಕ ಸೆಳೆಯುತ್ತಾರೆ. ಹೀಗಾಗಿ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಲು ಈ ರೀತಿಯ ವ್ಯಕ್ತಿಗಳಿಗೆ ಮನ್ನಣೆ ನೀಡಬೇಕೆಂದು ರಾಜ್ಯ ಬಿಜೆಪಿ ಕೋರ ಕಮಿಟಿ ಮನವಿ ಮಾಡಿತ್ತು. ಹೀಗಾಗಿ ಜಗ್ಗೇಶ್ ಅವರಿಗೆ ರಾಜ್ಯಸಭಾ ಟಿಕೆಟ್ ಒಲಿದಿದೆ. ಇನ್ನು ನಟ ಜಗ್ಗೇಶ್ ಅವರಿಗೆ ರಾಜ್ಯಸಭಾ ಟಿಕೆಟ್ ನೀಡುವ ಮೂಲಕ ಚಿತ್ರರಂಗಕ್ಕೂ ಪ್ರಾಮುಖ್ಯತೆ ನೀಡಿದಂತಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ.

ಇನ್ನು ಜೂನ್ 10ರಂದು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Seetharaman) ಮತ್ತು ನಟ ಜಗ್ಗೇಶ್‍ಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‍ನಿಂದ ಜೈರಾಮ್ ರಮೇಶ್‍ಗೆ ಟಿಕೆಟ್ ಪಕ್ಕಾ ಆಗಿದ್ದರೆ, ಜೆಡಿಎಸ್‍ನಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿಯಲಿದ್ದಾರೆ.

Exit mobile version