ಜೆ.ಪಿ ನಡ್ಡಾ ‘ತ್ಯಾಗ’ದ ಮಾತು, ‘ದಂಗಾದ’ ರಾಜ್ಯ ಬಿಜೆಪಿ ಸಚಿವರು!

BJP

ವಿಜಯನಗರದಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ(State BJP) ಕಾರ್ಯಕಾರಣಿಯ ಕೊನೆಯ ದಿನ ಪಕ್ಷದ ಎಲ್ಲ ಕಾರ್ಯಕರ್ತರು, ಶಾಸಕರು, ಸಂಸದರು ಮತ್ತು ಸಚಿವರನ್ನು ಉದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ(JP Nadda) ಆಡಿದ ಆ ಒಂದು ಮಾತು ಇದೀಗ ರಾಜ್ಯ ಬಿಜೆಪಿ ಸಚಿವರಿಗೆ ಆಘಾತ ನೀಡಿದೆ.


ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Vidhansabha Election) ಗೆಲ್ಲುವ ನಿಟ್ಟಿನಲ್ಲಿ ಅನೇಕ ಸಲಹೆಗಳನ್ನು ಜೆ.ಪಿ ನಡ್ಡಾ ರಾಜ್ಯ ಬಿಜೆಪಿ ಸರ್ಕಾರಕ್ಕೆ ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ನಡ್ಡಾ ಅವರು ‘ಪಕ್ಷಕ್ಕಾಗಿ ಪದತ್ಯಾಗಕ್ಕೂ ಸಿದ್ದರಿರಬೇಕು’ ಎಂದು ಹೇಳಿದ ಮಾತು ಕೇಳಿ ರಾಜ್ಯ ಬಿಜೆಪಿ ಸಚಿವರಿಗೆ ಆಘಾತವಾಗಿದೆ. ಈ ತಿಂಗಳ ಕೊನೆಯಲ್ಲಿ ನಡೆಯುವ ಸಂಪುಟ ವಿಸ್ತರಣೆಯಲ್ಲಿ ಅನೇಕ ಹಾಲಿ ಸಚಿವರನ್ನು ಕೈಬಿಟ್ಟು, ಚುನಾವಣಾ ಸಂಪುಟವನ್ನು ರಚಿಸಲು ನಡ್ಡಾ ಸಲಹೆ ನೀಡಿದ್ದಾರೆ. ಹೀಗಾಗಿ ಬಹುತೇಕ ಹಾಲಿ ಸಚಿವರು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸಚಿವರಾಗಿ ಕೆಲಸ ಮಾಡಲು ನಿಮಗೆ ಪಕ್ಷ ಸಾಕಷ್ಟು ಅವಕಾಶ ನೀಡಿದೆ. ಈಗ ನೀವು ಮುಂಬರುವ ಚುನಾವಣೆಗಾಗಿ ಮತ್ತು ಪಕ್ಷಕ್ಕಾಗಿ ಕೆಲಸ ಮಾಡಬೇಕಿದೆ. ಸಚಿವ ಸ್ಥಾನಗಳನ್ನು ಯುವ ಶಾಸಕರಿಗೆ ಕೊಟ್ಟು, ಹಿರಿಯ ನಾಯಕರೆಲ್ಲಾ ಪಕ್ಷ ಸಂಘಟನೆ ಮತ್ತು ಚುನಾವಣೆ ಕುರಿತು ಹೆಚ್ಚಿನ ಗಮನ ಕೇಂದ್ರೀಕರಿಸಬೇಕೆಂದು ಜೆ.ಪಿ ನಡ್ಡಾ ಸೂಚಿಸಿದ್ದಾರೆ. ಹೀಗಾಗಿ ಹಿರಿಯ ಶಾಸಕರು ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅವರ ಜಾಗವನ್ನು ಯುವ ಶಾಸಕರು ತುಂಬಲಿದ್ದಾರೆ. ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ನಡ್ಡಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಮಹತ್ವ ನೀಡುವುದು, ಪ್ರಬಲ ಲಿಂಗಾಯತ ಮತಬ್ಯಾಂಕ್ ಸೆಳೆಯಲು ಬಿಎಸ್‍ವೈ ಅವರಿಗೆ ಮಾನ್ಯತೆ ನೀಡುವುದು, ಪಕ್ಷ ಸಂಘಟನೆಗಾಗಿ ಅವರನ್ನು ಬಳಸಿಕೊಳ್ಳಲು ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಿದೆ. ಇನ್ನೊಂದೆಡೆ ಮುಂಬರುವ ಅಗಸ್ಟ್‍ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿಯಾಗಲಿದ್ದು, ಸಿಟಿ ರವಿ ಅಥವಾ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ.

Exit mobile version