ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ಸಾಹುಕಾರನ ಬೆನ್ನಿಗೆ ನಿಂತ ಬಿಜೆಪಿ ನಾಯಕರು

ಶಿವಮೊಗ್ಗ, ಮಾ. 03: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಸಿಡಿ ಸ್ಪೋಟದ ವಿಷಯದಲ್ಲಿ ಸಚಿವರ ಬೆನ್ನಿಗೆ ನಿಂತಿದ್ದಾರೆ.

ಸಿಡಿ ಸ್ಪೋಟದ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಅಶ್ವಥ್ ನಾರಾಯಣ್, ಸಿಡಿ ಬಿಡುಗಡೆ ಮಾಡಿರುವುದರ ಹಿಂದೆ ಷಡ್ಯಂತ್ರವಿದ್ದು, ದುರುದ್ದೇಶ ಪೂರ್ವಕವಾಗಿ ಸಚಿವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಘಟನೆ ಕುರಿತು ತನಿಖೆ ನಡೆದ ನಂತರವಷ್ಟೇ ನಿಜ ಹೊರಬರಲು ಸಾಧ್ಯ. ಹೀಗಾಗಿ ರಮೇಶ್ ಜಾರಕಿಹೊಳಿಯ ರಾಜೀನಾಮೆ ಪ್ರಶ್ನೆ ಉದ್ಭವಿಸುವುದಿಲ್ಲ.

ಅಲ್ಲದೇ, ಪ್ರಕರಣದ ಕುರಿತು ಪಕ್ಷದ ವರಿಷ್ಠರು ಗಮನಹರಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಿಡಿ ಪ್ರಕರಣದ ಮೂಲಕ ಜಾರಕಿಹೊಳಿಯನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಮೇಲ್ನೋಟಕ್ಕೆ ಇದು ಸತ್ಯಕ್ಕೆ ದೂರವಾದ ಘಟನೆ ಎಂದು ಅನಿಸುತ್ತಿದೆ ಹೀಗಾಗಿ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆ ಬರುವುದಿಲ್ಲ ಎಂದಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿರುವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಪ್ರಕರಣದ ಕುರಿತು
ಈಗಲೇ ಏನನ್ನೂ ಹೇಳುವಂತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಈ ವಿಚಾರದಲ್ಲಿ ನನ್ನ ಪಾತ್ರ ಏನೂ ಇಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಸಮಗ್ರವಾಗಿ ತನಿಖೆಯಾಗಲಿ. ಸತ್ಯಾಸತ್ಯತೆ ಏನು ಅಂತ ಗೊತ್ತಾಗಲಿ‌. ಆ ಮೇಲೆ ಪ್ರತಿಕ್ರಿಯೆ ನೀಡಬಹುದು‌ ಎಂದಿದ್ದಾರೆ.

ಮತ್ತೊಂದೆಡೆ ಇದೇ ವಿಷಯದ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ಇದೊಂದು ರಾಜಕೀಯ ಪಿತೂರಿಯಾಗಿದೆ ರಮೇಶ್ ಜಾರಕಿಹೊಳಿ ದೈವ ಭಕ್ತ. ಸಮಾಜಕ್ಕೆ ಅಂಜುವ ವ್ಯಕ್ತಿ. ಈ ರೀತಿಯ ತಪ್ಪು ಮಾಡಿರುತ್ತಾರೆ ಅಂತ ಅನ್ನಿಸುತ್ತಿಲ್ಲ. ನಿನ್ನೆಯಿಂದಲೂ ನಾನು ಮೈಸೂರಿನಲ್ಲೇ ಇದ್ದೇನೆ. ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸತ್ಯಾಸತ್ಯತೆ ಪರಿಶೀಲನೆ ಆಗುವವರೆಗೂ ನೋಡೋಣ.

ಆದರೆ ಈ ವಿಚಾರದಲ್ಲಿ ನಾನು ರಮೇಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ಇದ್ದೇನೆ. ಈಗಾಗಲೇ ಅವರ ಜೊತೆ ಮಾತನಾಡಿದ್ದೇನೆ, ಅವರು ನಾನು ತಪ್ಪು ಮಾಡಿಲ್ಲ ಎಂದಿದ್ದಾರೆ. ರಾಜಕಾರಣದಲ್ಲಿ ಯಶಸ್ಸ ಸಿಕ್ಕಾಗ ವಿರೋಧಿಗಳು ಷಡ್ಯಂತ್ರ ರೂಪಿಸ್ತಾರೆ. ರಮೇಶ್ ಜಾರಕಿಹೊಳಿ ವಿಚಾರದಲ್ಲೂ ಇದು ನಡೆದಿದೆ. ನಾನು ರಮೇಶ್ ಜಾರಕಿಹೊಳಿ ಪರವಾಗಿ ನಿಲ್ಲುತ್ತೇನೆ , ಪ್ರಕರಣದ ಬಗ್ಗೆ ಸಮಗ್ತ ತನಿಖೆ ಆಗಲಿದೆ ಇದಾದ ಬಳಿಕ ಸತ್ಯಾಸತ್ಯತೆ ಹೊರಬುರತ್ತೆ ಅಂತ ತಿಳಿಸಿದರು.

Exit mobile version