ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ; ರೇಸ್‌ನಲ್ಲಿ ಮೂವರು!

BJP

ಬೆಂಗಳೂರು : ಹಾಲಿ ಬಿಜೆಪಿ(BJP) ರಾಜ್ಯಾಧ್ಯಕ್ಷರ ಅಧಿಕಾರವಧಿ ಈ ತಿಂಗಳ ಕೊನೆಗೆ ಮುಕ್ತಾಯವಾಗಲಿದೆ. ಹೀಗಾಗಿ ಕರ್ನಾಟಕ ಬಿಜೆಪಿಗೆ ನೂತನ ಸಾರಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಮುಂದಿನ ವರ್ಷ ರಾಜ್ಯ ವಿಧಾನಸಭಾ ಚುನಾವಣೆ(Vidhansabha Election) ನಡೆಯಲಿದ್ದು, ಹೀಗಾಗಿ ರಾಜ್ಯಾಧ್ಯಕ್ಷರ ಆಯ್ಕೆ ಅತ್ಯಂತ ಮಹತ್ವದ ಅಂಶವಾಗಿದೆ.

ಹೀಗಾಗಿಯೇ ಬಿಜೆಪಿ ಹೈಕಮಾಂಡ್‌(Highcommand) ಸಾಕಷ್ಟು ಅಳೆದು-ತೂಗಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಚಿಂತನೆ ನಡೆಸಿದೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಮೂವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.


ಸಿ.ಟಿ.ರವಿ : ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಟಿ ರವಿ ಅವರ ಹೆಸರು ರಾಜ್ಯಾಧ್ಯಕ್ಷ ಹುದ್ದೆಗೆ ಪ್ರಮುಖವಾಗಿ ಕೇಳಿ ಬರುತ್ತಿದೆ. ಹಿಂದೂ ಫೈರ್‌ಬ್ರ್ಯಾಂಡ್‌ ಖ್ಯಾತಿಯ ಸಿಟಿ ರವಿ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಪಕ್ಷ ಸಂಘಟನೆಯಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಹಿಂದುತ್ವದ ನೆಲೆಯಲ್ಲಿ ಚುನಾವಣೆ ಎದುರಿಸಲು ಸಿಟಿ ರವಿ ಮುಖ್ಯವಾಗುತ್ತಾರೆ. ಅವರಿಗೆ ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದೆ. ಹೀಗಾಗಿ ಅವರ ಹೆಸರು ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಕೇಳಿ ಬರುತ್ತಿದೆ.

ಅರವಿಂದ ಲಿಂಬಾವಳಿ : ಸದ್ಯ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಶಾಸಕರಾಗಿರುವ ಅರವಿಂದ ಲಿಂಬಾವಳಿ ಅವರ ಹೆಸರು ಕೂಡಾ ರಾಜ್ಯಾಧ್ಯಕ್ಷರ ಹುದ್ದೆಗೆ ಕೇಳಿ ಬರುತ್ತಿದೆ. ದಲಿತ ಸಮುದಾಯದವರಾಗಿರುವ ಅರವಿಂದ ಲಿಂಬಾವಳಿ ಅವರು, ಆರ್‌ಎಸ್‌ಎಸ್‌ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಮುಖ್ಯಮಂತ್ರಿ ಹುದ್ದೆ ಲಿಂಗಾಯತ ಸಮುದಾಯದವರ ಪಾಲಾಗಿದ್ದು, ದಲಿತ ಸಮುದಾಯದವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಚುನಾವಣೆಯಲ್ಲಿ ನೆರವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಹೀಗಾಗಿ ಅರವಿಂದ ಲಿಂಬಾವಳಿ ಅವರ ಹೆಸರು ಹೈಕಮಾಂಡ್‌ಪಟ್ಟಿಯಲ್ಲಿದೆ ಎನ್ನಲಾಗುತ್ತಿದೆ.

ಶೋಭಾ ಕರಂದ್ಲಾಜೆ : ಸದ್ಯ ಕೇಂದ್ರ ರಾಜ್ಯ ಖಾತೆಯ ಕೃಷಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರ ಹೆಸರು ಕೂಡಾ ರಾಜ್ಯಾಧ್ಯಕ್ಷರ ಹುದ್ದೆಗೆ ಕೇಳಿ ಬರುತ್ತಿದೆ. ಆರ್‌ಎಸ್‌ಎಸ್‌ಹಿನ್ನಲೆ ಹೊಂದಿರುವ ಶೋಭಾ ಪರವಾಗಿ ಆರ್‌ಎಸ್‌ಎಸ್‌ನಾಯಕರು ಪ್ರಭಾವ ಬೀರುವ ಸಾಧ್ಯತೆ ಇದೆ. ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿ ರಾಜ್ಯ ರಾಜಕೀಯದಿಂದ ದೂರವಾಗಿರುವ ಶೋಭಾ ಅವರನ್ನು ಮತ್ತೆ ರಾಜ್ಯ ರಾಜಕೀಯಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಶೋಭಾ ಕರಂದ್ಲಾಜೆ ಅವರನ್ನು ಮಹಿಳಾ ಅಭ್ಯರ್ಥಿಯಾಗಿ ಪರಿಗಣಿಸುವ ಸಾಧ್ಯತೆಯು ಹೆಚ್ಚಿದೆ.

ಒಟ್ಟಾರೆಯಾಗಿ ಈ ತಿಂಗಳ ಕೊನೆಗೆ ಬಿಜೆಪಿಗೆ ಹೊಸ ಸಾರಥಿ ನೇಮಕವಾಗಲಿದ್ದಾರೆ. ಮೋದಿ- ಅಮಿತ್‌ಶಾ ಜೋಡಿಯ ನಿರ್ಧಾರವೇ ರಾಜ್ಯಾಧ್ಯಕ್ಷರ ನೇಮಕದಲ್ಲಿ ಅಂತಿಮವಾಗಲಿದೆ.

Exit mobile version