ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಿಡಿ

ಬೆಂಗಳೂರು, ನ. 25: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಯಿಂದ ಸಮನ್ಸ್‌ ಪಡೆದಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಧ್ಯ ವಿಚಾರಣೆಗಾಗಿ ಸಿಬಿಐ ಕಚೇರಿಗೆ ಆಗಮಿಸಿದ್ದಾರೆ.

ಸಿಬಿಐ ಕಚೇರಿಗೆ ಭೇಟಿ ನೀಡುವ ಮುನ್ನ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಡಿಕೆಶಿ ಮಾತನಾಡಿದ್ದು, ‘ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ ಯಾಕೆ? ನನ್ನ ಮೇಲೆ ನಡೆಯುತ್ತಿರುವ ತನಿಖೆ ದ್ವೇಷದ ರಾಜಕಾರಣವಲ್ಲವೇ?’ ಎಂದು ಕಿಡಿಕಾರಿದರು.

ಇನ್ನು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಡಿಕೆಶಿ, ‘ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ. ನಾನು ಮಾಡಬಾರದ ಕೆಲಸ ಮಾಡಿಲ್ಲ. ಹೀಗಾಗಿ ಹೆದರುವ ಅಗತ್ಯವಿಲ್ಲ. ನಾನು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ನನ್ನ ವಿರುದ್ಧ ತನಿಖೆ ಮಾಡುವಂತೆ ಸಿಬಿಐಗೆ ಅನುಮತಿ ನೀಡಿದ್ದಾರೆ. ಇದುವರೆಗೂ ಯಾರ ಮೇಲೆ ಈ ರೀತಿ ತನಿಖೆ ಮಾಡಿಸಿದ್ದಾರೆ? ರಾಜ್ಯದಲ್ಲಿ ನಾನೊಬ್ಬನೇ ಆಸ್ತಿ ಸಂಪಾದಿಸಿದ್ದೇನಾ? ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯಾ? ಯಾವುದಾದರೂ ಆರೋಪ ಸಾಬೀತಾಗಿದೆಯಾ? ಯಾರ ಬಳಿಯಾದರೂ ನಾನು ಲಂಚ ಪಡೆದಿದ್ದೇನಾ? ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನಾ? ಇಂಧನ ಸಚಿವ ಆಗಿದ್ದಾಗ ಅಕ್ರಮ ಮಾಡಿದ್ದೇನಾ? ಯಡಿಯೂರಪ್ಪನವರೇ ಅಧಿಕಾರದಲ್ಲಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಸಿಬಿಐಗೆ ಕೊಡುವ ಅಗತ್ಯ ಏನಿತ್ತು?’ ಎಂದು ಪ್ರಶ್ನಿಸಿದರು.

Exit mobile version