ಸೋಲುವ ಸ್ಪರ್ಧೆಗೆ ಮಾರ್ಗರೇಟ್ ಆಳ್ವರನ್ನು ದೂಡಿರುವುದು ಕಾಂಗ್ರೆಸ್ ಕ್ರಿಶ್ಚಿಯನ್ನರಿಗೆ ಕೊಡುತ್ತಿರುವ ಕೊಡುಗೆ : ಬಿಜೆಪಿ

BJP

ಕಳೆದ ಬಾರಿಯ ವಿಧಾನಸಭಾ ಚುನಾವಣೆ(Vidhansabha Election) ಸಂದರ್ಭದಲ್ಲಿ ಸೋಲುವ ಸ್ಪರ್ಧೆಗೆ ಮಾರ್ಗರೇಟ್ ಆಳ್ವ ಅವರನ್ನು ದೂಡಿರುವುದು ಕಾಂಗ್ರೆಸ್(Congress) ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಕೊಡುತ್ತಿರುವ ಕೊಡುಗೆ ಎಂದು ವ್ಯಾಖ್ಯಾನಿಸಬಹುದೇ? ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.


ಕರಾವಳಿ ಭಾಗದ ಹಿರಿಯ ಕಾಂಗ್ರೆಸ್‌ ನಾಯಕಿ ಮಾರ್ಗರೇಟ್‌ ಆಳ್ವ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ(Vice-President Election) ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನಾಗಿಸಿದ ಕುರಿತು ಬಿಜೆಪಿ ಲೇವಡಿ ಮಾಡಿದ್ದು, ಗಾಂಧಿ ಕುಟುಂಬದ ಧೋರಣೆಯನ್ನು ಈ ಹಿಂದೆ ಪ್ರಶ್ನಿಸಿದ್ದಕ್ಕಾಗಿ ಈ ಕೊಡುಗೆ? ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಟಿಕೆಟ್ ಮಾರಾಟವಾಗಿದೆ ಎಂದು ಮಾರ್ಗರೇಟ್ ನೇರ ಆರೋಪ ಮಾಡಿದ್ದರು. ಹೊರಗಡೆಯಿಂದ ಬಂದವರು, ರಾಜ್ಯದ ಬಗ್ಗೆ ಅರಿವಿಲ್ಲದವರು ಟಿಕೆಟ್ ನಿರ್ಧರಿಸುತ್ತಿದ್ದಾರೆ ಎಂದು ದೂರಿದ್ದರು.

ಕಾಂಗ್ರೆಸ್ ಧೋರಣೆಯನ್ನು ಪ್ರಶ್ನಿಸಿದವರಿಗೇ ಮಣೆ ಹಾಕಿರುವುದರ ಗುಟ್ಟೇನು? ಎಂದು ಪ್ರಶ್ನಿಸಿದೆ. ಇನ್ನು ಮಾರ್ಗರೇಟ್ ಆಳ್ವ ಅವರನ್ನು ಕಾಂಗ್ರೆಸ್ ಹರಕೆಯ ಕುರಿಯಾಗಿಸಲು ಹೊರಟಿದೆ. ರಾಜಕೀಯವಾಗಿ ಈಗಾಗಲೇ ಮೂಲೆಗುಂಪಾಗಿದ್ದ ಆಳ್ವಾ ಕುಟುಂಬಕ್ಕೆ ಭವಿಷ್ಯದ ಎಲ್ಲ ರಾಜಕೀಯ ಆಯ್ಕೆಗಳನ್ನು ಕಾಂಗ್ರೆಸ್ ವರಿಷ್ಠರು “ಡೆಡ್ ಎಂಡ್” ಗೆ ತಂದು ನಿಲ್ಲಿಸಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಇನ್ನು ತಮ್ಮನ್ನು ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಿದ ಕಾಂಗ್ರೆಸ್‌ ಸೇರಿದಂತೆ ಎಲ್ಲ ಎನ್‌ಡಿಎಯೇತರ ಪಕ್ಷಗಳಿಗೆ ಧನ್ಯವಾದ ತಿಳಸಿರುವ ಮಾಗರೇಟ್‌ಆಳ್ವ ಅವರು,

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದು ಕೂಡಾ ವಿಶೇಷವಾದ ಗೌರವವಾಗಿದೆ. ಈ ಗೌರವ ನನಗೆ ಸಿಕ್ಕಿರುವುದು ಸಂತಸ ತಂದಿದೆ. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆ ಅತ್ಯಂತ ಮುಖ್ಯವಾಗಿರುತ್ತದೆ ಎಂದಿದ್ದಾರೆ. ಇನ್ನು ಆಗಸ್ಟ್‌ ೬ರಂದು ಉಪರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ಪ್ರಕ್ರಿಯೆಯೂ ನಡೆಯಲಿದೆ.

Exit mobile version