ಗಿಡ-ಮೂಲಿಕೆ, ಔಷಧ ಸಸ್ಯ ಸಂಪತ್ತನ್ನು ಪೋಷಿಸಿ ಬೆಳಸುತ್ತಿರುವ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ರಾಮೇಗೌಡ

ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ(BR Hills) ಮತ್ತು ಮೀಸಲು ಅರಣ್ಯ(Forest) ನಮ್ಮ ಕನ್ನಡ ನಾಡಿನ ಸೌಭಾಗ್ಯ-ಸಮೃಧ್ಧತೆಯ ಪ್ರತೀಕಗಳಲ್ಲೊಂದು. ಸಾವಿರಾರು ಕ್ರಿಮಿ-ಕೀಟಗಳ, ಪ್ರಾಣಿ-ಪಕ್ಷಿಗಳ ಮತ್ತು ಗಿಡ-ಮರ-ಬಳ್ಳಿಗಳ ವೈವಿಧ್ಯತೆಯ ನೆಲೆ ಬೀಡು ಈ ನಮ್ಮ ಕಾಡು. ಬಿಳಿಗಿರಿರಂಗನಾಥ ಸ್ವಾಮಿ ಸನ್ನಿಧಿಯ ಕೂಗಳತೆಯ ದೂರದಲ್ಲಿ, ಗುಂಗರು ಕೂದಲು-ಪೊದೆ ಗಡ್ಡದ ಮನುಷ್ಯನೊಬ್ಬ ತನ್ನದೇ ಹಸಿರ ಜೀವ ಜಗತ್ತಿನೊಂದಿಗೆ ಕಾಯಕವಾಗಿರುವನು. ಆತನೆ ನಮ್ಮ ಅಡವಿ ದೇವಿಯ ಕಾಡಿನ ಮಗ, ಜಡೆರುದ್ರಸ್ವಾಮಿ ಗಿಡ-ಮೂಲಿಕೆ ಸಸ್ಯಕಾಶಿಯ ಸೋಲಿಗರ ರಾಮೇಗೌಡ.


ಸಾಮಾನ್ಯವಾಗಿ ಕಾಡಿನ ಜನ ನಾವು (ನಾಡಿನವರು) ಕಾಡನ್ನೇ ಕಾಡುವಂತೆ ಬಾಳುವ ಬದಲು , ಕಾಡಿನೊಂದಿಗೆ ಹುಟ್ಟಿ-ಕಾಡಿನೊಂದಿಗೆ ಸಹಬಾಳ್ವೆ ನಡೆಸುವರು. ಅವರೆಂದೂ ನಾಗರಿಕತೆಯ(?) ಹುಚ್ಚು ಕುದುರೆಯೇರಿ ಸವಾರಿಗಿಳಿದವರಲ್ಲ. ಅವರಿಗೆ ಅವರ ಸ್ವಾವಲಂಬನೆ-ಸ್ವಾಭಿಮಾನದ ಕಾಡ ಪಾಡೇ ಮಿಗಿಲು. ಇಂತಹವರಲ್ಲಿ ನಮ್ಮ ರಾಮೇಗೌಡ ‘ಮರವಾಗೆಂದರೆ ಹೆಮ್ಮರವಾದವರು’ ನಮ್ಮ ದೇಸಿ ವೈದ್ಯ ಪರಂಪರೆಯ ಗಿಡ-ಮೂಲಿಕೆಗಳು, ವೈವಿಧ್ಯ ಸಸ್ಯ ಸಂಪತ್ತನ್ನು ತಿಳಿಸುವ, ಉಳಿಸುವ ಮತ್ತು ಪಸರಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಇವರ ಬಳಿ ಅವರೆ ಹೆಸರೇಳುವಂತೆ ಮುನ್ನೂರಕ್ಕೂ ಅಧಿಕ ಜಾತಿಯ ಗಿಡ-ಮೂಲಿಕೆ ಮತ್ತು ಸಸ್ಯ ವೈವಿಧ್ಯತೆಯ ಸಸಿಗಳಿವೆ.

ಈ ಸಸ್ಯಾಭಿವೃಧ್ದಿ ಮತ್ತು ಪ್ರಸರಣೆಯಲ್ಲಿ ರಾಮೇಗೌಡ ಮತ್ತು ಅವರ ಶ್ರೀಮತಿ ಕಾರ್ಯಪ್ರವೃತ್ತರಾಗಿರುವರು. ಅವರು ಮನಸ್ಸು ಮಾಡಿದ್ದರೆ, ಅವರಿಗಿರುವ ಅಗಾಧ ತಿಳುವಳಿಕೆಯನ್ನೆ ಬಂಡವಾಳವಾಗಿ ಮಾಡಿಕೊಂಡು ನಗರಗಳ ಖ್ಯಾತ ನರ್ಸರಿಗಳೊಂದಿಗೆ ಸೇರಿಕೊಂಡು ಕೈ ತುಂಬಾವೇನೂ, ಮನೆ ತುಂಬಾ ಹಣ ಸಂಪಾದನೆ ಮಾಡಬಹುದಿತ್ತು. ಆದರೆ ಗೌಡರು ತನ್ನ ನೆಲದಲ್ಲೆ ತನ್ನ ತನವನ್ನೂ ಉಳಿಸಿಕೊಂಡು , ಕಾಡು ಮತ್ತು ನಾಡಿನ ಕೊಂಡಿಯಾಗಿ ಹಸಿರ ಬಿತ್ತುತ್ತಿರುವರು. ನಾನು, ಅಕ್ಕಾ ಮತ್ತು ಅಜ್ಜಿ ಕಳೆದ ವಾರವಷ್ಟೇ ಬೆಟ್ಟಕ್ಕೆ ಹೋಗಿ ಹಸಿರು ಉಸಿರಾಡುವುದರ ಜೊತೆಗೆ, ರಾಮೇಗೌಡನ ಹಸಿರ ಜೀವ ಜಗತ್ತನ್ನು ಕಣ್ತುಂಬಿಕೊಂಡು ಬಂದಿದ್ದೆವು.

ಇಂದು ನೈಸರ್ಗಿಕ ಕೃಷಿಯಲ್ಲಿ ಬೆಳೆಯಲು ನಾಟಿ ಶುಂಠಿಯನ್ನು ಅವರಿಂದ ತಂದೆವು. ಹಾಗೆ ನಮ್ಮ ಕಾರಂಜಿ ಟ್ರಸ್ಟಿನ ವತಿಯಿಂದ ಶಾಲಾ ಆವರಣದಲ್ಲಿ ಗಿಡ ನೆಡಿಸಲು- ಅಂಜೂರ, ರುದ್ರಾಕ್ಷಿ, ಸಂಪಿಗೆ, ಹೊನ್ನೆ, ಕಕ್ಕಿಲು, ಬಿಕ್ಕಿಲು, ಜಾಲ, ನೀಳಲು, ಜಾಯಿಕಾಯಿ, ಬೇವು, ಬಾಗೆ, ಕಾಡಳ್ಳು, ಮಾದಲ, ನೇರಳೆ ಮೊದಲಾದ ನಲವತ್ತು ಜಾತಿಯ ಸಸಿಗಳನ್ನು ತಂದ ನಮಗೆ ಸಮೃಧ್ಧಿಯನ್ನೇ ತಂದ ಸಂತೃಪ್ತಿ.


ರಾಮೇಗೌಡರನ್ನು ಸಂಪರ್ಕಿಸಲು – 88619 95754
ಮಾಹಿತಿ ಕೃಪೆ : ಪರಿಸರ ಪರಿವಾರ/ ಬೆಳವಾಡಿ ನವೀನ್ ಕುಮಾರ್

Exit mobile version