ಅಂಧರ ಪಾಲಿನ ಆಶಾಕಿರಣ ಈ ‘ಬ್ರೈಲ್ ಲಿಪಿ’ಯ ಅನ್ವೇಷಣೆ ; ಬ್ರೈಲ್ ಲಿಪಿ ಹಿಂದಿದೆ ರೋಚಕ ಕಥೆ!

ಅಂಧರ(Blind) ಜೀವನವನ್ನು ಸ್ವಲ್ಪ ಮಟ್ಟಿಗಾದರೂ ಸುಧಾರಿಸುವಲ್ಲಿ ಸಹಾಯಕವಾಗುವ ಬ್ರೈಲ್ ಲಿಪಿಯನ್ನು(Brail Lipi) ಕಂಡುಹಿಡಿದವರು ಲೂಯಿಸ್ ಬ್ರೈಲ್(Louis Brail).

ಇವರು 1809 ರ ಜನವರಿ 4 ರಂದು ಫ್ರಾನ್ಸ್‌ನಲ್ಲಿ(France) ಜನಿಸಿದರು. ಫ್ರೆಂಚ್ ಶಿಕ್ಷಣ ತಜ್ಞರಾಗಿದ್ದ ಬ್ರೈಲ್ ಅಂಧರಿಗಾಗಿಯೇ ಮುದ್ರಣ ಮತ್ತು ಬರವಣಿಗೆಯ ವ್ಯವಸ್ಥೆಯನ್ನ ಅಭಿವೃದ್ಧಿಪಡಿಸಿದರು. ಬ್ರೈಲ್ ಲಿಪಿಯನ್ನು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿರುವವರು ವ್ಯಾಪಕವಾಗಿ ಬಳಸುತ್ತಾರೆ. ಸರಿಯಾಗಿ ದೃಷ್ಟಿ ಹೊಂದಿರುವ ಜನರೇ ಈ ಜಗತ್ತಿನಲ್ಲಿ ಬದುಕಲು ಪರಿಪಾಟಲು ಪಡುತ್ತಿರುವಾಗ, ಇನ್ನು ದೃಷ್ಟಿಹೀನರು ಎಷ್ಟು ಕಷ್ಟಪಡುತ್ತಾರೆ ಎಂಬುದನ್ನು ನೀವೆ ಊಹಿಸಿ. ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮಾಡುವುದು ಕೂಡ ಇವರಿಗೆ ಕಷ್ಟಕರವಾಗುತ್ತದೆ.

ಈ ಜನರಿಗೆ ಓದವುದು ಮತ್ತು ಬರೆಯುವುದು ಬಹಳ ಕಷ್ಟ, ಸ್ವತಃ ಅಂಧರಾಗಿದ್ದ ಬ್ರೈಲ್ ಅವರಿಗೆ ಈ ಕಷ್ಟದ ಅರಿವಿತ್ತು. ಹಾಗಾಗಿ ಇಂತವರಿಗೆ ಸಹಾಯ ಮಾಡಲು, ಲೂಯಿಸ್ ಅವರು ಬ್ರೈಲ್ ಲಿಪಿಯನ್ನು ಕಂಡುಹಿಡಿದರು. ದೃಷ್ಟಿಹೀನ ಜನರಿಗೆ ಜಾಗತಿಕವಾಗಿ ಸಾರ್ವತ್ರಿಕ ಭಾಷೆಯನ್ನು ರೂಪಿಸಿದರು. ಬ್ರೈಲ್ ಅವರ ಗೌರವಾರ್ಥವಾಗಿ ಇವರ ಹುಟ್ಟಿದ ದಿನವನ್ನೇ ವಿಶ್ವ ಬ್ರೈಲ್ ದಿನವನ್ನಾಗಿ ಆಚರಿಸಲಾಗುತ್ತದೆ. ಇವರು ಅಪಘಾತದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡರೂ, ತಮ್ಮ ಅಧ್ಯಯನದ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ.

ಫ್ರಾನ್ಸ್‌ನ ರಾಯಲ್ ಇನ್‌ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಯೂತ್‌ ನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನವನ್ನು ಸಹ ಪಡೆದರು. 1824 ರಲ್ಲಿ, ತಮ್ಮ 15ನೇ ವಯಸ್ಸಿನಲ್ಲಿ, ಲೂಯಿಸ್ ಮೊಟ್ಟ ಮೊದಲು ದೃಷ್ಟಿಹೀನರಿಗಾಗಿ ಬ್ರೈಲ್ ಅನ್ನು ಅಭಿವೃದ್ಧಿಪಡಿಸಿದರು. ಆದರೆ ಇದನ್ನು ಮೊದಲು ಪ್ರಕಟಿಸಿದ್ದು 1829 ರಲ್ಲಿ, ನಂತರದ ವರ್ಷಗಳಲ್ಲಿ ಬ್ರೈಲ್ ನಲ್ಲಿ ಬಹಳಷ್ಟು ಸುಧಾರಿತ ವ್ಯವಸ್ಥೆಗಳಾಗಿವೆ.
ಬ್ರೈಲ್ ಎಂಬುದು ವಿವಿಧ ವರ್ಣಮಾಲೆಗಳು ಮತ್ತು ಸಂಖ್ಯಾತ್ಮಕ ಚಿಹ್ನೆಗಳನ್ನು ಪ್ರತಿನಿಧಿಸಲು ಆರು ಚುಕ್ಕೆಗಳೊಂದಿಗೆ ಬರೆಯಲ್ಪಟ್ಟ ಭಾಷೆಯಾಗಿದೆ.

ಈ ಆರು ಚುಕ್ಕೆಗಳನ್ನು ಸಂಗೀತ ಟಿಪ್ಪಣಿಗಳು ಮತ್ತು ಗಣಿತ(Mathematics) ಮತ್ತು ವೈಜ್ಞಾನಿಕ ಚಿಹ್ನೆಗಳನ್ನು ಪ್ರತಿನಿಧಿಸಲು ಬಳಸಲಾಗುತ್ತದೆ. ಅಂಧರು ಮತ್ತು ಭಾಗಶಃ ದೃಷ್ಟಿ ದೋಷ ಇರುವ ಜನರ ದೈನಂದಿನ ಜೀವನವನ್ನು ಸುಲಭಕರಿಸಲು ಬ್ರೈಲ್ ಲಿಪಿಯಲ್ಲಿ ಬಹಳಷ್ಟು ಸುಧಾರಣೆಗಳೊಂದಿಗೆ ಜಾರಿ ಮಾಡಲಾಗಿದೆ ಹಾಗೂ ಇದು ಇಂದಿಗೂ ಯಶಸ್ವಿಯಾಗಿ ಚಾಲ್ತಿಯಲ್ಲಿದೆ.

Exit mobile version