ಕೇಸರಿ ಪಡೆಯಲ್ಲಿ ಮತ್ತೆ ಬಿ.ಎಸ್ ಯಡಿಯೂರಪ್ಪನವರ(BS Yedurappa) ಹಿಡಿತ ಬಿಗಿಗೊಂಡಿದೆ. ಸಿಎಂ ಗಾದಿಯಿಂದ ಕೆಳಗಿಳಿದ ನಂತರ ಬಿಎಸ್ ಯಡಿಯೂರಪ್ಪ ಮೂಲೆಗುಂಪಾಗುತ್ತಾರೆ ಎಂಬ ಟೀಕೆಗಳಿಗೆ ಉತ್ತರ ಎಂಬಂತೆ ಬಿಎಸ್‍ವೈ ತಮ್ಮ ಪುತ್ರ ವಿಜಯೇಂದ್ರ ಮೂಲಕ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದಾರೆ ಎನ್ನುತ್ತಿವೆ ಬಿಜೆಪಿ(BJP) ಮೂಲಗಳು.

ಬಿಜೆಪಿಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತುಗಳೆಂದರೆ ಇಂದಿಗೂ ಬಿಜೆಪಿಯಲ್ಲಿ ಬಿ.ಎಸ್ ಯಡಿಯೂರಪ್ಪನವರು ಬಿಗಿ ಹಿಡಿತ ಹೊಂದಿದ್ದಾರೆ. ಇಂದಿಗೂ ಬಿಜೆಪಿಯ ಶೇಕಡಾ 70ರಷ್ಟು ಮುಖಂಡರು ಬಿಎಸ್‍ವೈರನ್ನು ಬೆಂಬಲಿಸುತ್ತಾರೆ. ಬಿಜೆಪಿಯ ಕೇಂದ್ರ ವರಿಷ್ಠರು ಕೂಡಾ ಬಿಎಸ್‍ವೈ ಮಾತಿಗೆ ಮನ್ನಣೆ ನೀಡುತ್ತಾರೆ. ಹುದ್ದೆಯಿಂದ ಕೆಳಗಿಳಿದರು, ಬಿಎಸ್‍ವೈ ಅವರ ರಾಜಕೀಯ ಶಕ್ತಿ ಮಾತ್ರ ಕಡಿಮೆಯಾಗಿಲ್ಲ ಎಂಬ ಸಂಗತಿಯ ಅರಿವು ಕೇಂದ್ರ ವರಿಷ್ಠರಿಗಿದೆ. ಹೀಗಾಗಿಯೇ ಬಿಎಸ್‍ವೈ ಮಾತು ದೆಹಲಿಯಲ್ಲಿಯೂ ನಡೆಯುತ್ತದೆ.
ಇನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ಪುತ್ರ ಬಿ.ವೈ ವಿಜಯೇಂದ್ರಗೆ ಸಚಿವ ಸ್ಥಾನ ನೀಡಬೇಕೆಂಬ ಷರತ್ತನ್ನು ಬಿಎಸ್‍ವೈ ಕೇಂದ್ರ ವರಿಷ್ಠರ ಮುಂದಿಟ್ಟಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಬಿಎಸ್‍ವೈ ಅವರ ಷರತ್ತನ್ನು ಒಪ್ಪಿಕೊಳ್ಳಲು ದೆಹಲಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಪ್ರಬಲ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಬಿಎಸ್‍ವೈ ಅವರನ್ನು ಈ ಕ್ಷಣದಲ್ಲಿ ಕಡೆಗಣಿಸಲು ಸಾಧ್ಯವಿಲ್ಲ ಎನ್ನುವುದು ದೆಹಲಿ ನಾಯಕರ ಅಭಿಪ್ರಾಯ. ಇನ್ನು ಬಿ.ವೈ ವಿಜಯೇಂದ್ರ ಕೂಡಾ ಪಕ್ಷ ಸಂಘಟನೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ತಂದೆಯ ನಂತರ ಲಿಂಗಾಯತ ಸಮುದಾಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ವಿಜಯೇಂದ್ರ ಮುಂದಿನ ದಿನಗಳಲ್ಲಿ ಬಿಜೆಪಿಗೆ ಅನಿವಾರ್ಯ ನಾಯಕನಾಗಲಿದ್ದಾರೆ. ಈಗಾಗಲೇ ಪಕ್ಷದಲ್ಲಿ ಹಿಡಿತ ಹೊಂದಿರುವ ವಿಜಯೇಂದ್ರ 2023ರ ನಂತರ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರದ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ರಣತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.