Shivamogga: ಶಕ್ತಿ ಯೋಜನೆಯು ರಾಜ್ಯಾದ್ಯಂತ ಭರದಿಂದ ಸಾಗುತ್ತಿದೆ. ಆದರೆ ಶಿವಮೊಗ್ಗಕ್ಕೆ (Shivamogga) ಮಾತ್ರ ಇದರ ಲಾಭ ಸಿಗುತ್ತಿಲ್ಲ. ರಾಜಕೀಯ ಶಕ್ತಿ ಕೇಂದ್ರವೆಂದೇ ಕರೆಯಲ್ಪಡುವ ಶಿವಮೊಗ್ಗ ಜಿಲ್ಲೆಯ 431 ಹಳ್ಳಿಗಳಿಗೆ ಸರಕಾರಿ ಬಸ್ ಸಂಪರ್ಕವೇ ಇಲ್ಲ. ಹಾಗಿರುವಾಗ ಶಕ್ತಿ ಯೋಜನೆಯು ಜಾರಿಯಾಗುವುದು ಇನ್ನೆಲ್ಲಿಂದ ಬಂತು? ಭದ್ರಾವತಿ (Bhadravathi), ಶಿಕಾರಿಪುರ ಹೊರತುಪಡಿಸಿದರೆ ಎಲ್ಲ ತಾಲೂಕುಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ಗಳ ಸಂಪರ್ಕವೇ ಇಲ್ಲ.

ರಾಜ್ಯಕ್ಕೆ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿರುವ ಶಿವಮೊಗ್ಗ(Shivamogga) ಜಿಲ್ಲೆಯಲ್ಲಿ ಈ ಮೂಲಸೌಕರ್ಯದ ಕೊರತೆಯಾಗಿರುವುದು ವಿಪರ್ಯಾಸ. ಇದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗ ನೀಡಿರುವ ಮಾಹಿತಿಯಿಂದ ಬೆಳಕಿಗೆ ಬಂದಿದೆ. ಹಾಗಾಗಿ ಮಲೆನಾಡಿನ ಜನರು ನಿತ್ಯ ಪರದಾಡುವ ಸ್ಥಿತಿ ಎದುರಾಗಿದ್ದು, ಶಾಲಾ, ಕಾಲೇಜು (College) ಮತ್ತು ಕಚೇರಿಗೆ ತೆರಳುವವರು ಅನಿವಾರ್ಯವಾಗಿ ಖಾಸಗಿ ಬಸ್ ಅಥವಾ ಸ್ವಂತ ವಾಹನವನ್ನೇ ಅವಲಂಬಿಸುವ ಅನಿವಾರ್ಯತೆ ಇದೆ.
ಮಲೆನಾಡಿನ ಹಲವು ಹಳ್ಳಿಗಳಿಗಷ್ಟೇ ಉತ್ತಮ ರಸ್ತೆ ಸಂಪರ್ಕವಿಲ್ಲ. ಆದರೆ ಇನ್ನುಳಿದಂತೆ ಎಲ್ಲೆಡೆ ರಸ್ತೆಗಳಿವೆ. ಆದರೂ ಸಹ ಬಸ್ಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಬಸ್ (Bus) ಸೌಲಭ್ಯ ನೀಡುವಂತೆ ಹಲವು ಗ್ರಾಮಸ್ಥರು ನಿರಂತರ ಹೋರಾಟಗಳನ್ನು ಮಾಡಿ ಬೇಡಿಕೆ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ. ಬಸ್ ಸೇವೆ ಅಗತ್ಯವಿರುವ ಮಾರ್ಗಗಳಿಗೂ ಹೊಸದಾಗಿ ಸಂಚಾರ ಆರಂಭಿಸುವ ವಿಚಾರದಲ್ಲೂ ಮೌನ ವಹಿಸಲಾಗಿದೆ.
ಹೊಸನಗರಕ್ಕೆ ಪ್ರಸ್ತುತ ನಾಲ್ಕು ಬಸ್ಗಳು ಮಾತ್ರ ಇದ್ದು, ಅದರಲ್ಲಿ ಶಿವಮೊಗ್ಗದಿಂದ ಬರೀ ಎರಡು ಬಸ್ ಇದ್ದು, ಈ ಹಿಂದೆ ಸಾಗರದಿಂದ (Sagara) ಮಣಿಪಾಲ್ಗೆ ತೆರಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಬಸ್ ಒದಗಿಸಲಾಗಿತ್ತು. ಉತ್ತಮ ಬೇಡಿಕೆ ಇದ್ದರೂ ದಿಢೀರ್ ಆಗಿ ಸೇವೆ ಸ್ಥಗಿತಗೊಳಿಸಲಾಗಿತ್ತು. ಅದೇ ರೀತಿ ರಾಮಚಂದ್ರಾಪುರ (Ramachandrapura) – ಬೆಂಗಳೂರು (Bengaluru) ಬಸ್ ಅನ್ನೂ ಸ್ಥಗಿತಗೊಳಿಸಲಾಗಿದೆ. ನಿರಂತರ ಬಸ್ಗಳ ಪ್ರಯಾಣ ಜಾಸ್ತಿಯಾದರೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುವ ಸಾಧ್ಯತೆಯೂ ಇದೆ. ಇನ್ನು ಇಲ್ಲಿ ಮಾತ್ರವಲ್ಲದೆ ಇದೇ ಸ್ಥಿತಿ ಮಲೆನಾಡಿನ ಹಲವು ತಾಲೂಕುಗಳಲ್ಲಿದೆ.

ಕೋವಿಡ್ (Covid) ಸಂದರ್ಭದಲ್ಲಿಎದುರಾದ ತುರ್ತು ಸ್ಥಿತಿಯಿಂದಾಗಿ ಆರ್ಥಿಕ ಭಾರ ತಾಳದೇ ಹಲವು ಸಹಕಾರಿ ಸಂಸ್ಥೆಗಳು ಬಾಗಿಲು ಹಾಕಿವೆ. ಇದರಿಂದ ಹಲವು ಹಳ್ಳಿಗಳಿಗೆ ಬಸ್ ಸೇವೆಯೇ ಸಿಗದಂತಾಗಿದೆ. ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರವೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ನೀಡಿದೆ. ಆದರೆ ಇದು ಮಲೆನಾಡಿನ ಮಹಿಳೆಯರಿಗೆ ಪ್ರಯೋಜನವಾಗುತ್ತಿಲ್ಲ. ಸಾಗರ, ತೀರ್ಥಹಳ್ಳಿ (Tirthahalli) ಮತ್ತು ಹೊಸನಗರದಲ್ಲಿಅತಿ ಹೆಚ್ಚು ಹಳ್ಳಿಗಳು ಕೆಎಸ್ಆರ್ಟಿಸಿ (KSRTC) ಬಸ್ ಮುಖವನ್ನೇ ನೋಡಿಲ್ಲ. ಕರಾವಳಿ ಮತ್ತು ಮಲೆನಾಡಿನ ಜನರ ಅನುಕೂಲಕ್ಕಾಗಿ ಸಹಕಾರಿ ಸಂಸ್ಥೆಗಳು ಬಸ್ಗಳನ್ನು ಓಡಿಸುತ್ತಿದ್ದರು.
ಬಸ್ ಸಂಪರ್ಕವಿಲ್ಲದ ಗ್ರಾಮಗಳ ಸಂಖ್ಯೆ
ಶಿವಮೊಗ್ಗ – 36
ಭದ್ರಾವತಿ – 13
ಸಾಗರ -74
ಹೊಸನಗರ -110
ಸೊರಬ – 46
ಶಿಕಾರಿಪುರ -15
ತೀರ್ಥಹಳ್ಳಿ -137
ಒಟ್ಟು – 431.
ಸೌಲಭ್ಯ ನೀಡದಿರಲು ಕಾರಣಗಳು:
ಕುಗ್ರಾಮಗಳಿಗೆ ರಸ್ತೆಯ ಕೊರತೆ
ರಾಜಕೀಯ ಇಚ್ಛಾಶಕ್ತಿ ಕೊರತೆ
ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದು
ಕಲೆಕ್ಷನ್ ಎಂಬ ಕುಂಟು ನೆಪ
ಕಲೆಕ್ಷನ್ ನೆಪ, ಖಾಸಗಿ ಬಸ್ಗಳ ಲಾಬಿ
ಪರಿಣಾಮಗಳು:
ಬಸ್ಗಾಗಿ ಗಂಟೆಗಟ್ಟಲೇ ಕಾಯುವ ಸ್ಥಿತಿ
ವ್ಯಾಪಾರ, ವಹಿವಾಟಿನ ಮೇಲೆಯೂ ಪರಿಣಾಮ
ಖಾಸಗಿ ಬಸ್ಗಳ ಮೇಲೆಯೇ ಅವಲಂಬನೆ
ಶಾಲಾ- ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡೇ ಹೋಗುವ ಪರಿಸ್ಥಿತಿ
ಸ್ವಂತ ವಾಹನಗಳ ಮೇಲೆ ಅವಲಂಬನೆಯಿಂದಾಗಿ ವಾಹನಗಳ ಸಂಖ್ಯೆ ಹೆಚ್ಚಳ
ರೈತರು, ನಾಗರಿಕರು ಪೇಟೆಗೆ ಬರಲು ಇಡೀ ದಿನ ವ್ಯಯ
ಭವ್ಯಶ್ರೀ ಆರ್.ಜೆ