ಕಾಟನ್ ಕ್ಯಾಂಡಿ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್​ ಕಾರಕ ಅಂಶ ಪತ್ತೆ: ತಿನ್ನುವ ಮುನ್ನ ಎಚ್ಚರ!

Bengaluru: ಪಾನಿಪುರಿ (Panipuri) ಅಂದರೆ ಬೇಡ ಎನ್ನುವವರಿಗಿಂತ ಬೇಕು ಎನ್ನುವವರೇ ಹೆಚ್ಚು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಪಾನಿಪುರಿ ನೆಚ್ಚಿನ ಸ್ನ್ಯಾಕ್ಸ್ ಆಗಿದ್ದು ಕೆಲವರು ವಾರಕ್ಕೊಮ್ಮೆ ಪಾನೀಪುರಿ ತಿಂದರೆ ಇನ್ನೂ ಕೆಲವರು ನಿತ್ಯ ಪಾನಿಪುರಿ ತಿನ್ನುವವರಿದ್ದಾರೆ. ಒಟ್ಟಿನಲ್ಲಿ ಪಾನಿಪೂರಿ ಎಂದರೆ ತಿಂಡಿ ಎನ್ನುವುದಕ್ಕಿಂತ ಎಮೋಷನಲ್ ಎಂದರೆ ಒಳ್ಳೆಯದು. ಗೋಬಿ , ಕಬಾಬ್, ಕಾಟನ್ ಕ್ಯಾಂಡಿ (Gobi, Kabab, Cotton Candy) ಯಲ್ಲಿ ಬಳಸುವ ಬಣ್ಣಗಳು ಕ್ಯಾನ್ಸರ್ ಕಾರಕವಾಗಿರುವ ಕಾರಣ ಬ್ಯಾನ್ (Ban) ಮಾಡಿರುವ ಹಾಗೆಯೇ ಹಲವರ ನೆಚ್ಚಿನ ಪಾನಿಪುರಿ ದೇಹಕ್ಕೆ ಎಷ್ಟು ಸುರಕ್ಷಿತ ಎಂದು ಕಂಡುಹಿಡಿಯಲು ಆಹಾರ ಇಲಾಖೆ ಅದರ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಿದೆ. ಈ ಪರೀಕ್ಷೆಯಲ್ಲಿ ಪಾನಿಪುರಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ವರದಿಗಳು ಬಹಿರಂಗಪಡಿಸಿವೆ.

Gobi-Kabab

ಕೆಲ ದಿನಗಳ ಹಿಂದೆ ಬೆಂಗಳೂರಿನ ನಾನಾ ಭಾಗಗಳಲ್ಲಿ ಮಾರಾಟವಾಗುವ 243 ಪಾನಿಪುರಿ ಸ್ಯಾಂಪಲ್ಸ್ ತೆಗೆದುಕೊಂಡು ಪರೀಕ್ಷೆ ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ಪಾನಿಪುರಿಯಲ್ಲಿ ಅಪಾಯಕಾರಿ ಕೆಮಿಕಲ್ಸ್ (Chemicals) ಬಳಕೆ ಮಾಡುತ್ತಿರುವುದು ಬಹಿರಂಗವಾಗಿದೆ. ಪರೀಕ್ಷೆಗೆ ಒಳಪಡಿಸಿದ 243 ಸ್ಯಾಂಪಲ್ಸ್‌ಗಳ ಪೈಕಿ 49 ಬಳಕೆಗೆ ಅಂದರೆ ತಿನ್ನಲು ಅಸುರಕ್ಷಿತ ಎಂದು ತಿಳಿದು ಬಂದಿದೆ. ಪರಿಶೀಲನೆ ವೇಳೆ ಪಾನಿಪೂರಿ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ (Carcinogen) ಅಂಶ ಇರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೆ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್ ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧರಿಸಿದೆ.

ಹಲವು ಕಡೆಗಳಲ್ಲಿ ರುಚಿ ಹೆಚ್ಚಿಸಲು ಪಾನಿಪುರಿ ತಯಾರಿಕೆಯಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿದ್ದಾರೆ. ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆ. ಹೀಗಾಗಿ ಕ್ಯಾನ್ಸರ್ ಕಾರಕ ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್​ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಪಾನಿಪುರಿಯಲ್ಲಿ 4-5 ರಾಸಾಯನಿಕಗಳನ್ನು ಬಳಸಿರುವುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.

Exit mobile version