ಲಂಚ ಪ್ರಕರಣ ಹಿನ್ನಲೆ, ರಾಘವೇಂದ್ರಗೆ ಜಾಮೀನು ನಿರಾಕಸಿದ ಕೋರ್ಟ್

ಬೆಂಗಳೂರು ಸೆ 27 : ಪೊಲೀಸ್ ಠಾಣೆಯಲ್ಲೇ ಖಾಸಗಿ ವ್ಯಕ್ತಿ ಮೂಲಕ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದು,ಜೈಲು ಸೇರಿರುವ ಚಿಕ್ಕಜಾಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಘವೇಂದ್ರಗೆ ಎಸಿಬಿ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿ ಜಾಮೀನು ನೀಡಲು ನಿರಾಕರಿಸಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜನತೆಗಾಗಿ ಟ್ರಸ್ಟ್ ಸ್ಥಾಪಿಸಿ ಸೇವೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸಾಕಷ್ಟು ಪಬ್ಲಿಸಿಟಿ ಗಿಟ್ಟಿಸಿಕೊಂಡಿದ್ದ ರಾಘವೇಂದ್ರ ,ಶಿವ ಶಂಕರ್ ಎಂಬುವವರಿಂದ ಜಮೀನಿನಲ್ಲಿ ಹಾಕಿರೋ ಬೋರ್ಡ್ ತೆಗೆಸಿಕೊಡಲು ಹತ್ತು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಈ ಲಂಚದ ಹಣವನ್ನು ತೆಗೆದುಕೊಳ್ಳುವಾಗ ಕಳೆದ ಸೆಪ್ಟೆಂಬರ್ 18 ರಂದು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದರು.

ಇದೇ ಪ್ರಕರಣದಲ್ಲಿ ಈ ಹಿಂದೆ ತಲಾ ಎರಡು ಬಾರಿ ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದರು. ಬಾಕಿ ಉಳಿದಿರುವ 2 ಲಕ್ಷ ಲಂಚದ ಹಣವನ್ನು ಖಾಸಗಿ ವ್ಯಕ್ತಿ ರಾಘವೇಂದ್ರ ಮೂಲಕ ಪಡೆಯುವ ವೇಳೆ ಎಸಿಬಿ ಪೊಲೀಸರಿಗೆ ಸಿಕ್ಕಿ ಬಿದಿದ್ದರು.

ಎಸಿಬಿ ಅಧಿಕಾರಿಗಳು  ಇನ್ಸ್ ಪೆಕ್ಟರ್ ರಾಘವೇಂದ್ರ ವಿಚಾರಣೆ ನಡೆಸಿ ಬಂಧಿಸಿದ್ದರು. ಬಳಿಕ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಪರಪ್ಪನ ಅಗ್ರಹಾರ ಜೈಲು ಸೇರಿರುವ ರಾಘವೇಂದ್ರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎಸಿಬಿ ನ್ಯಾಯಾಲಯ ರಾಘವೇಂದ್ರ ಜಾಮೀನು ಅರ್ಜಿ ವಜಾಗೊಳಿಸಿ ಬೇಲ್ ನೀಡಲು ಅರ್ಹರಲ್ಲ ಎಂದು ಹೇಳಿದೆ. ಈಗ ಇನ್ಸ್ ಪೆಕ್ಟರ್ ರಾಘವೇಂದ್ರ ಜಾಮೀನಿಗಾಗಿ ಹೈಕೋರ್ಟ್ ಮೋರೆ ಹೋಗಬೇಕಿದೆ.

ಚಿಕ್ಕಮಗಳೂರು ಮೂಲದ ಹೀರೇಮಗಳೂರಿನ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಮಂದಿಗೆ ಸಹಾಯ ಮಾಡಿ, ಪಾವಗಡ ಜನರ ಮೇಲೆ ಅಭಿಮಾನ ಬೆಳೆಸಿಕೊಂಡಿದ್ದರು. ಪಾವಗಡ ತಾಲೂಕು ಸಮಗ್ರ ಅಭಿವೃದ್ಧಿ ಟ್ರಸ್ಟ್ ಸೃಷ್ಠಿಸಿ ಒಳ್ಳೆ ಒಳ್ಳೆ ಕೆಲಸ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದ್ದರು. ಆದರೆ ಲಂಚ ಪ್ರಕರಣದ ಅರೋಪದಡಿ ಜೈಲು ಸೇರಿದ್ದ ಅವರಿಗೆ ಜಾಮೀನು ಕೂಡ ಸಿಗದೆ ಪುನಃ ಜೈಲುವಾಸ ಅನುಭವಿಸುವಂತಾಗಿದೆ.

Exit mobile version