ಮೂರು ಮಕ್ಕಳನ್ನು ಪಡೆಯಲು ಚೀನಾ ಸಮ್ಮತಿ

ಬೀಜಿಂಗ್‌, ಮೇ. 31: ಚೀನಾದ ಒಟ್ಟು ಜನಸಂಖ್ಯೆಯಲ್ಲಿ ಹಿರಿಯರ ಸಂಖ್ಯೆ ಏರಿಕೆಯಾಗುತ್ತಿದೆ ಎಂಬ ಅಂಶ ಜನಗಣತಿ ವೇಳೆ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ, ಇನ್ನು ಮುಂದೆ ನಾಗರಿಕರು ಗರಿಷ್ಠ ಮೂರು ಮಕ್ಕಳನ್ನು ಹೊಂದುವುದಕ್ಕೆ ಸರ್ಕಾರ ಅವಕಾಶ ನೀಡಿ ತೀರ್ಮಾನ ಕೈಗೊಂಡಿದೆ.

ಚೀನಾ ಸುಮಾರು 40 ವರ್ಷಗಳ ಕಾಲ ‘ಒಂದೇ ಮಗು’ ನೀತಿ ಅನುಸರಿಸುತ್ತಾ ಬಂದಿತ್ತು. ಇದು ವಿಶ್ವದ ಕಟುವಾದ ಕುಟುಂಬ ಯೋಜನೆ ನಿಯಮಗಳಲ್ಲಿ ಒಂದು ಎನಿಸಿಕೊಂಡಿತ್ತು. ಇದು, ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತವಾಗಿದ್ದರಿಂದ 2016 ರಲ್ಲಿ ಈ ನೀತಿ ತೆಗೆದುಹಾಕಿ, `ಎರಡು ಮಕ್ಕಳು’ ನೀತಿಯನ್ನು ಜಾರಿಗೆ ತಂದಿತ್ತು.

ಆದರೆ ಸದ್ಯ ಜನರಿಗೆ ವಯಸ್ಸಾಗುತ್ತಿರುವುದಕ್ಕೆ ಪ್ರತಿಯಾದ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಚೀನಾ ಸದ್ಯ ಮೂರು ಮಕ್ಕಳನ್ನು ಹೊಂದಬಹುದಾದ ಅವಕಾಶವನ್ನು ನಾಗರಿಕರಿಗೆ ನೀಡಿದೆ ಎಂದು ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ವರದಿ ಮಾಡಿದೆ. ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆಯೋಜಿಸಿದ್ದ ಚೀನಾದ ಪೊಲಿಟ್ ಬ್ಯುರೊ ಸಮಿತಿಯ ಸೋಮವಾರದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Exit mobile version